ಮಧ್ಯಪ್ರದೇಶ -
	ಭಾರತದ ಒಂದು ರಾಜ್ಯ. ಹೆಸರೇ ತಿಳಿಸುವಂತೆ ಈ ರಾಜ್ಯ ಭಾರತದ ಮಧ್ಯ ಭಾಗದಲ್ಲಿ ಉ.ಅ.20( 50' ನಿಂದ 26( 52' ವರೆಗೂ ಪೂ.ರೇ 74( 2' ನಿಂದ 82( 24' ವರೆಗೂ ವ್ಯಾಪಿಸಿದೆ. ಈ ರಾಜ್ಯದ ಉತ್ತರ ಮತ್ತು ಈಶಾನ್ಯದಲ್ಲಿ ಉತ್ತರ ಪ್ರದೇಶ, ಪೂರ್ವ ಮತ್ತು ಆಗ್ನೇಯದಲ್ಲಿ ಚತ್ತೀಸ್‍ಘರ್, ದಕ್ಷಿಣದಲ್ಲಿ ಮಹಾರಾಷ್ಟ್ರ, ಪಶ್ಚಿಮದಲ್ಲಿ ಗುಜರಾತ್ ಮತ್ತು ರಾಜಸ್ಥಾನ ರಾಜ್ಯಗಳು ಸುತ್ತುವರಿದಿವೆ. ವಿಸ್ತೀರ್ಣ 308,000 ಚಕಿಮೀ. ಭಾರತದ ಹೆಚ್ಚು ಪ್ರದೇಶವನ್ನು ಆವರಿಸಿದೆ. ಜನಸಂಖ್ಯೆ 6,03,85118 (2001) ರಾಜಧಾನಿ ಭೋಪಾಲ. 

	ಮೇಲ್ಮೈಲಕ್ಷಣ : ಈ ರಾಜ್ಯದ ಹೆಚ್ಚು ಪ್ರದೇಶ ಮಧ್ಯ ಭಾರತದ ಪ್ರಸ್ಥಭೂಮಿಯನ್ನೊಳಗೊಂಡಿದೆ. ಉತ್ತರದಲ್ಲಿ ಗಂಗಾನದಿ ಮೈದಾನ, ಪಶ್ಚಿಮದಲ್ಲಿ ರಾಜಸ್ಥಾನ ಶುಷ್ಕ ಪ್ರದೇಶ ಇವೆ. ಈ ಪ್ರದೇಶದ ಬೆಟ್ಟಗಳ ಶ್ರೇಣಿ ಮತ್ತು ಪ್ರಸ್ಥಭೂಮಿ ಭಾಗಗಳು ಪೂರ್ವದ ಚತ್ತೀಸ್‍ಘರ್ ಪ್ರಾಂತ್ಯಗಳವರೆಗೆ ಮುಂದುವರಿದಿವೆ. ರಾಜ್ಯದ ಉತ್ತರದಲ್ಲಿ ಬುಂದೇಲ್ ಖಂಡ್ ಪ್ರಸ್ಥಭೂಮಿ. ದಕ್ಷಿಣದಲ್ಲಿ ಬಸ್ತಾರ ಪ್ರಸ್ಥಭೂಮಿ, ನೈರುತ್ಯದಲ್ಲಿ ಡೆಕ್ಕನ್ ಪ್ರಸ್ಥಭೂಮಿ. ಪೂರ್ವದಲ್ಲಿ ವಿಂಧ್ಯಪ್ರಸ್ಥಭೂಮಿ ಇವೆ. ಪರ್ವತಗಳು ಪೂರ್ವ-ಪಶ್ಚಿಮವಾಗಿ ಹಬ್ಬಿವೆ. ಇವುಗಳಲ್ಲಿ ಸಾತ್ಪುರ, ಮಹದೇವ ಮತ್ತು ಮೈಕಲ್ ಪರ್ವತಶ್ರೇಣಿಗಳು ಮುಖ್ಯವಾದವು. ಮಧ್ಯಪ್ರದೇಶದಲ್ಲಿ ಅನೇಕ ಮೈದಾನಗಳಿವೆ. ಚಂಬಲ್ ಮೈದಾನ ಉತ್ತರದಲ್ಲೂ, ಚತ್ತೀಸ್‍ಘರ್ ಮೈದಾನ ಆಗ್ನೇಯದಲ್ಲೂ ಇದೆ. ನರ್ಮದಾ-ಸೋನೆ ನದಿಗಳ ಕಣಿವೆ ಪೂರ್ವ-ಪಶ್ಚಿಮವಾಗಿ ಕರ್ಕಾಟಕ ಸಂಕ್ರಾಂತಿ ವೃತ್ತಕ್ಕೆ ಸಮಾನಾಂತರವಾಗಿ ಇದೆ. ಇಲ್ಲಿಯ ಪ್ರಸ್ಥಭೂಮಿ ಎತ್ತರ ಸುಮಾರು 304-608 ಮೀ. ಬೆಟ್ಟಗಳ ಎತ್ತರ ಸುಮಾರು 912-608 ಮೀ. ಪರ್ವತಭಾಗಗಳ ಎತ್ತರ ಸುಮಾರು 912-1308 ಮೀ. ಮೈದಾನ ಪ್ರದೇಶದ ಎತ್ತರ ಸಾಮಾನ್ಯವಾಗಿ 152-304 ಮೀ. ಅಂದರೆ ಕೆಲವು ಕಣಿವೆಗಳು 152 ಮೀಗಿಂತಲೂ ತಗ್ಗಾಗಿವೆ. ಈ ರಾಜ್ಯದ ಮಧ್ಯದಲ್ಲಿರುವ ಪರ್ವತ ಪ್ರದೇಶ ಇಲ್ಲಿಯ ನದಿಗಳಿಗೆ ಜಲವಿಭಾಜಕ ಕ್ಷೇತ್ರ. ಅನೇಕ ನದಿಗಳು ಇಲ್ಲಿ ಉಗಮಿಸುವುವು. ರಾಜ್ಯದ ಹೆಚ್ಚು ಭಾಗ ಗಂಗಾನದಿ, ಮಹಾನದಿ ಮತ್ತು ಗೋದಾವರಿ ನದಿ ಪ್ರದೇಶಗಳ ಕಡೆಗೆ ಹರಿಯುವ ನದಿಗಳಿಂದ ಕೂಡಿದೆ. ಗಂಗಾನದಿ ಕೊಳ್ಳದಡೆಗೆ ಚಂಬಲ್ ಬೆತ್ವಾ, ಕೆನೆ ಮತ್ತು ಸೋನೆ ನದಿಗಳು ಉತ್ತರ ಮತ್ತು ಈಶಾನ್ಯ ದಿಕ್ಕಿಗೆ ಅಭಿಮುಖವಾಗಿ ಹರಿಯುವುವು. ಮಹಾನದಿ ಮತ್ತು ವೈನ ಗಂಗಾ ನದಿಗಳು ಅನೇಕ ಉಪನದಿಗಳೊಡನೆ ಪೂರ್ವದ ಕಡೆಗೆ ಹರಿಯುತ್ತವೆ. ನರ್ಮದಾ ಮತ್ತು ತಪತಿ ನದಿಗಳು ಮಾತ್ರ ಪಶ್ಚಿಮದ ಕಡೆಗೆ ಹರಿದು ಮುಂದೆ ಅರಬ್ಬೀಸಮುದ್ರ ಸೇರುತ್ತವೆ. 

	ವಾಯುಗುಣ : ಮಧ್ಯಪ್ರದೇಶ ಉಷ್ಣಾಧಿಕ್ಯ ಪ್ರದೇಶ. ಸಾಮಾನ್ಯವಾಗಿ ಇಲ್ಲಿಯ ವಾಯುಗುಣವನ್ನು ಬೇಸಗೆ ಕಾಲ ಮತ್ತು ತಂಪಾದ ಶುಷ್ಕ ಚಳಿಗಾಲವೆಂದು ವಿಂಗಡಿಸಬಹುದು. ವಾರ್ಷಿಕ ಸರಾಸರಿ ಮಳೆ ಪ್ರಮಾಣ ಸುಮಾರು 1.016 ಮಿಮೀ. ಮಳೆ ಪೂರ್ವದಿಂದ ಪಶ್ಚಿಮದ ಕಡೆಗೆ ಸಾಗಿದಂತೆ ಕಡಿಮೆಯಾಗುವುದು. ಪಶ್ಚಿಮ ಮತ್ತು ವಾಯುವ್ಯ ಭಾಗಗಳಲ್ಲಿ 862 ಮಿಮೀ ಗಳಿಗಿಂತ ಕಡಿಮೆ ಮಳೆಯಾಗುತ್ತದೆ. ಆಗ್ನೇಯದಲ್ಲಿರುವ ಬಲಘಾಟ್, ಮಾಂಡ್ಲ ಜಿಲ್ಲೆಗಳಲ್ಲಿ ಹೆಚ್ಚು ಮಳೆ ಬೀಳುತ್ತದೆ.

	ಕೃಷಿ: ರಾಜ್ಯದಲ್ಲಿ ಕೃಷಿ ಪ್ರಧಾನ. ಶೇಕಡಾ 83 ಮಂದಿ ಗ್ರಾಮದಲ್ಲಿದ್ದು ವ್ಯವಸಾಯ ನಿರತರಾಗಿದ್ದಾರೆ. ಒಟ್ಟು ಭೂಮಿಯಲ್ಲಿ ಶೇಕಡಾ 42 ಭಾಗ ಕೃಷಿಗೆ ಒಳಪಟ್ಟಿದೆ. ಇದರಲ್ಲಿ ನೀರಾವರಿಗೆ ಒಳಪಟ್ಟಿರುವ ಭಾಗ ಶೇಕಡಾ 12.3. ಮಾಳವ ಪ್ರದೇಶ ಫಲವತ್ತಾದ ಹತ್ತಿಬೆಳೆಯ ಕಪ್ಪುಮಣ್ಣಿನಿಂದ ಕೂಡಿದೆ. ನರ್ಮದಾನದಿ ಕಣಿವೆ ಪ್ರದೇಶ ಫಲವತ್ತಾದ ಮೆಕ್ಕಲು ಮಣ್ಣಿನಿಂದ ಆವರಿಸಿದ್ದು ಬುಂದೇಲ್ ಖಂಡ, ಭಾಗೇಲ್ ಖಂಡ ಮೈದಾನ ಪ್ರದೇಶದಲ್ಲೂ ಫಲವತ್ತಾದ ಮಣ್ಣಿದೆ. ಜೋಳ, ಗೋಧಿ, ಬತ್ತ ಮತ್ತು ವಿವಿಧ ಧಾನ್ಯಗಳ ಜೊತೆ ಆರ್ಥಿಕ ಬೆಳೆಗಳಾಗಿ ಕಬ್ಬು, ನೆಲಗಡಲೆ, ನಾರಗಸೆಬೀಜ ಸೋಯಾಬೀನ್ ಸಾಸುವೆ, ಹರಳುಬೀಜ ಹೊಗೆಸೊಪ್ಪು ಮತ್ತು ಹತ್ತಿಮೊದಲಾದವನ್ನು ಬೆಳಸುತ್ತಾರೆ. ಪಶುಸಂಪತ್ತಿದೆ. ಹಸು, ಎತ್ತು, ಎಮ್ಮೆ, ಕುರಿ ಆಡುಗಳು ಮತ್ತು ಹಂದಿ, ಒಂಟೆ ಮುಂತಾದುವುಂಟು.

	ಅರಣ್ಯ; ರಾಜ್ಯದ ಒಟ್ಟು ಭೂಪ್ರದೇಶದ ಶೇಕಡಾ 35 ಭಾಗ ಕಾಡಿನಿಂದ ಕೂಡಿದೆ. ಟೀಕ್, ಸಾಲ, ಸಾಜ, ಬೈಜ ಮುಂತಾದ ಮರಗಳೂ ಬೊಂಬುಗಳು ಮುಂತಾದವು ಹೆಚ್ಚಾಗಿ ಬೆಳೆಯುತ್ತವೆ. ಈ ಕಾಡಿನಿಂದ ಅನೇಕ ಕೈಗಾರಿಕೆಗಳು ನಡೆಯುತ್ತಿರುವುವಲ್ಲದೆ ವಿವಿಧ ಗೃಹೋಪಯೋಗಕ್ಕೆ ಬೇಕಾದ ಮರಮುಟ್ಟುಗಳಲ್ಲಿ ಶೇಕಡಾ 60 ಭಾಗ ಈ ಅರಣ್ಯದಿಂದಲೇ ದೊರಕುತ್ತಿದೆ. ನಾಗಪುರದ ಈಶಾನ್ಯಕ್ಕೆ 200ಕಿಮೀ ದೂರದಲ್ಲಿ ಕಾನ್ಯ ಅಭಯಾರಣ್ಯವಿದೆ. ಇದನ್ನು ರಾಷ್ಟ್ರೀಯ ಉದ್ಯಾನವೆಂದು 1955ರಲ್ಲಿ ಘೋಷಿಸಿ ರಕ್ಷಿಸಿಕೊಂಡು ಬರುತ್ತಿದ್ದಾರೆ. ಈ ಅಭಯಾರಣ್ಯದ ವಿಸ್ತೀರ್ಣ 256ಚ.ಕಿಮೀ. ಇದರ ಜೊತೆಗೆ ಸಿರ್‍ಪುರಿ ಮತ್ತು ಬಂದರ್ ಘರ್ ರಾಷ್ಟ್ರೀಯ ಉದ್ಯಾನಗಳಿವೆ. 

	ಖನಿಜಗಳು : ಮಧ್ಯಪ್ರದೇಶ ವಿವಿಧ ಖನಿಜಸಂಪತ್ತನ್ನು ಹೊಂದಿದೆ. ಇದ್ದಲು, ಕಬ್ಬಿಣ, ಮ್ಯಾಂಗನೀಸ್, ಬಾಕ್ಸೈಟ್, ಕಾವಿಮಣ್ಣು (ಓಕರ್). ಸಿಲಿಮನೈಟ್, ಸುಣ್ಣಕಲ್ಲು, ಡಾಲೊಮೈಟ್, ರಂಜಕ, ತಾಮ್ರ, ಬೇರಿಯಮ್, ಚೀನೀಮಣ್ಣು, ಕುರಂದಕಲ್ಲು (ಪಚ್ಚೆ, ಕೆಂಪು, ಇತ್ಯಾದಿ), ವಜ್ರ, ಡೈಯಾಸ್ಪೋರ್, ಕಲ್ನಾರು, ಗಾಜು ತಯಾರಿಕೆಯ ಮರಳು, ಬೆಣಚುಕಲ್ಲು, ಫೆಲ್ಡ್‍ಸ್ಪಾರ್ ಇತ್ಯಾದಿ ಇಲ್ಲಿ ದೊರಕುತ್ತವೆ.	ಕೈಗಾರಿಕೆ : ಈ ಪ್ರಾಂತದ ಕೈಗಾರಿಕೆಗಳನ್ನು ವ್ಯವಸಾಯ ಉತ್ಪನ್ನಗಳನ್ನು ಅವಲಂಬಿಸಿರುವ ಅರಣ್ಯ ವಸ್ತುಗಳನ್ನು ಅವಲಂಬಿಸಿರುವ ಮತ್ತು ಖನಿಜ ಸಂಪತ್ತು ಅವಲಂಬಿಸಿರುವ ಕೈಗಾರಿಕೆಗಳೆಂದು ಮೂರು ವಿಧವಾಗಿ ವಿಂಗಡಿಸಲಾಗಿದೆ. ವ್ಯವಸಾಯ ಉತ್ಪನ್ನಗಳನ್ನು ಅವಲಂಬಿಸಿರುವ ಕೈಗಾರಿಕೆಗಳಲ್ಲಿ ಹತ್ತಿಬಟ್ಟೆ ತಯಾರಿಕೆ ಮುಖ್ಯವಾದದ್ದು. ಹೆಚ್ಚಾಗಿ ರಾಜ್ಯದ ಪಶ್ಚಿಮದ ಜಿಲ್ಲೆಗಳಲ್ಲಿ ಬಟ್ಟೆ ಕಾರ್ಖಾನೆಗಳು ಹರಡಿವೆ. ಇಂದೂರು ಮುಖ್ಯ ಕೇಂದ್ರ. ಗ್ವಾಲಿಯರ್, ಉಜ್ಜಯಿನಿ, ಮನಸರ್, ದೇವಾಸ್, ರತ್ನಾಮ್, ಜಬ್ಬಲ್‍ಪುರ ಮತ್ತು ಸನಾಬಾದ್-ಬಟ್ಟೆ ತಯಾರಿಕೆಯ ಇತರ ಮುಖ್ಯ ಕೇಂದ್ರಗಳು. ಸುಮಾರು 23 ದೊಡ್ಡ ಬಟ್ಟೆ ಕಾರ್ಖಾನೆಗಳಿದ್ದು (1983) ಅವುಗಳಲ್ಲಿ 7 ಕಾರ್ಖಾನೆಗಳನ್ನು ರಾಷ್ಟ್ರೀಕರಿಸಲಾಗಿದೆ. ಇವಲ್ಲದೆ ಅನೇಕ ಬಗೆಯ ನೂಲು ತೆಗೆಯುವ ಹಾಗೂ ಜಿನ್ನಿಂಗ್ ಮತ್ತು ಪ್ರೆಸ್ಸಿಂಗ್ ಕಾರ್ಖಾನೆಗಳೂ ಇದ್ದು ಮಧ್ಯಪ್ರದೇಶದ ಬಟ್ಟೆ ಉತ್ಪಾದನೆ ಪ್ರಮುಖ ಕೈಗಾರಿಕೆಯಾಗಿದೆ. ಜಾವ್ರದಾಲೌದ, ಮೆಹಿದ್‍ಪುರ, ದಾಬ್ರಾ ಮತ್ತು ಸೆಹೋರ್ ಎಂಬಲ್ಲಿ ಸಕ್ಕರೆ ಕಾರ್ಖಾನೆಗಳು ಇವೆ. ಉಜ್ಜಯಿನಿ ಇಂದೂರು, ಭೋಪಾಲ್, ಗಂಜ್‍ಬಾಸೋಡಾ ಹಿಟ್ಟಿನ ಗಿರಣಿಗಳು: ದೇವಸ್, ಖಾಂಡ್ವಾ, ಉಜ್ಜಯಿನಿ ಮತ್ತು ಗಂಜ್‍ಬಾನೋಡಾಗಳಲ್ಲಿ ಎಣ್ಣೆ ಕಾರ್ಖಾನೆಗಳು ಮತ್ತು ಇಂದೂರಿನಲ್ಲಿ ವನಸ್ಪತಿ ತುಪ್ಪದ ಕಾರ್ಖಾನೆ ಇವೆ. ಕನ್ಫೆಕ್ಷನರಿಗಳು, ಬೇಕರಿಗಳು ಮತ್ತು ಹಾಲಿನ ಡೈರಿಗಳು ಗ್ವಾಲಿಯರ್, ಇಂದೂರ್, ಜಬ್ಬಲ್‍ಪುರ ಮತ್ತು ಭೋಪಾಲಗಳಲ್ಲಿವೆ. ಮಾಂಡಸಾರಿನಲ್ಲಿ ಪಿಷ್ಠ ತಯಾರಿಸುವ ಕಾರ್ಖಾನೆ ಇದೆ. ಅರಣ್ಯ ಉತ್ಪನ್ನಗಳನ್ನು ಅವಲಂಬಿಸಿರುವ ಕೈಗಾರಿಕೆಗಳಲ್ಲಿ ಮರಕೊಯ್ಯುವ ಕೈಗಾರಿಕೆ ಜಬ್ಬಲ್‍ಪುರದಲ್ಲಿ ಕೇಂದ್ರೀಕೃತವಾಗಿದ್ದರೂ ಇತರ ಪಟ್ಟಣಗಳಲ್ಲೂ ಕಂಡುಬರುತ್ತದೆ. ಭೋಪಾಲದಲ್ಲಿ ಮರವನ್ನು ಘನಗೊಳಿಸುವ ಕಾರ್ಖಾನೆಯಿದೆ. ಬೀಡಿ ತಯಾರಿಕೆ ಈ ರಾಜ್ಯದ ಮುಖ್ಯ ಕೈಗಾರಿಕೆಗಳಲ್ಲೊಂದು, ಇದು ಭಾಲಾಘಾಟ್, ಸಿಯೋನಿ, ಜಬ್ಬಲ್‍ಪುರ, ಪಾಮೋಹ, ಸಾಗರ್, ಭೋಪಾಲ ಪ್ರದೇಶದಲ್ಲಿ ಹೆಚ್ಚು ಕಂಡುಬರುವುದು. ಹೋಷಂಗಾಬಾದ್, ದೇವಾಸ್ ಮತ್ತು ನೇಪಾನಗರಗಳಲ್ಲಿ ರಕ್ಷಣಾ ಕಾಗದ ಪತ್ರಗಳ, ಬ್ಯಾಂಕ್ ನೋಟಿಗೆ ಬೇಕಾಗುವ ಹಾಗೂ ಇತರ ಬಗೆಯ ಕಾಗದಗಳ ಕಾರ್ಖಾನೆಗಳಿವೆ. ಕಾರ್ಖಾನೆಗಳಲ್ಲಿ ಒಂದಾದ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಭಿಲಾಯ್‍ನಲ್ಲಿದೆ. ಸಿಮೆಂಟ್ ಉತ್ಪಾದನೆಯಲ್ಲಿ ಮಧ್ಯಪ್ರದೇಶಕ್ಕೆ ಪ್ರಥಮಸ್ಥಾನ. ಜಬ್ಬಲ್‍ಪುರ ಜಿಲ್ಲೆಯ ಕಟ್ನಿಯ ಹತ್ತಿರವಿರುವ ಕೈಮೂರ್ ಎಂಬಲ್ಲಿ ದೊಡ್ಡ ಪ್ರಮಾಣದ ಸಿಮೆಂಟ್ ಕಾರ್ಖಾನೆಯಿದೆ. ಬಾನಮೋರ್ ಮತ್ತು ಸಾತ್ನಾಗಳಲ್ಲೂ ಸಿಮೆಂಟ್ ಕಾರ್ಖಾನೆಗಳಿವೆ. ಹೊಸದಾಗಿ ದಾಮೋಹ ಎಂಬಲ್ಲಿಯೂ ಸಿಮೆಂಟ್ ಕಾರ್ಖಾನೆಗಳನ್ನು ಸ್ಥಾಪಿಸುವ ಕೆಲಸ ನಡೆದಿತ್ತು. ಸಿಮೆಂಟಿನ ಷೀಟ್‍ಗಳನ್ನು ಕಟ್ನಿಯಲ್ಲಿ ತಯಾರಿಸುವರು. ಜಬ್ಬಲ್‍ಪುರ ಜಿಲ್ಲೆಯಲ್ಲಿಯೂ ಗ್ವಾಲಿಯರ್, ಶಾಡೋಳ್ ಮತ್ತು ರತ್ಲಾಮ್ ಪಟ್ಟಣಗಳಲ್ಲಿಯೂ ಗಾಜು ಸಾಮಾನಿನ ಕಾರ್ಖಾನೆಗಳಿವೆ. ಸುಣ್ಣದ ಭಟ್ಟಿಗಳು ಕಟ್ನಿ, ಝಕೇಹಿ, ಸಾತ್ನಾ, ಮೈಹಾರ್ ಮತ್ತು ಜಬ್ಬಲ್‍ಪುರ ಪ್ರದೇಶಗಳಲ್ಲಿವೆ. ಇಟ್ಟಿಗೆ ತಯಾರಿಕೆ ಜಬ್ಬಲಪುರ, ಇಂದೂರು, ಹೊಷಂಗಾಬಾದ್ ಮತ್ತು ಉಜ್ಜಯನಿಗಳಲ್ಲಿದೆ. ಈ ಎಲ್ಲ ಕಾರ್ಖಾನೆಗಳಲ್ಲಿ ಸ್ಥಳೀಯವಾಗಿ ದೊರಕುವ ಕಚ್ಚಾಸಾಮಗ್ರಿಗಳನ್ನೇ ಹೆಚ್ಚಾಗಿ ಬಳಸುವರು.

	ಇಂದೂರು ಮತ್ತು ನಾಗ್‍ಡದಲ್ಲಿ ಕೃತಕ ರೇಷ್ಮೆ ಕಾರ್ಖಾನೆಗಳೂ ನಾಗ್‍ಡದಲ್ಲಿ ರೇಯಾನ್ ಮತ್ತು ನೈಲಾನ್ ಕಾರ್ಖಾನೆಗಳೂ ಇವೆ. ಭೋಪಾಲದಲ್ಲಿ ದೊಡ್ಡ ವಿದ್ಯುತ್ ಯಂತ್ರೋಪಕರಣಗಳ ಕಾರ್ಖಾನೆ, ಗ್ವಾಲಿಯರಿನ ಬಟ್ಟೆ ಮಿಲ್ಲಿನ ಯಂತ್ರೋಪಕರಣಗಳ ಕಾರ್ಖಾನೆ, ದೇವಾಸ್‍ನಲ್ಲಿರುವ ವಿದ್ಯುತ್‍ಚಾಲಿತ ಪಂಪ್‍ಗಳ ಕಾರ್ಖಾನೆ ಮತ್ತು ಸಾತ್ನಾದ ಕೇಬಲ್‍ಗಳನ್ನು ತಯಾರಿಸುವ ಕಾರ್ಖಾನೆ ಇವು ಈ ರಾಜ್ಯದ ಯಂತ್ರೋಪಕರಣಗಳ ಕೈಗಾರಿಕೆಯಲ್ಲಿ ಮುಖ್ಯವಾದವು.

	ನಾಗ್‍ಡ ಮತ್ತು ಕುಮ್ಹಾರಿ ಎಂಬಲ್ಲಿ ಸಲ್ಫ್ಯೂರಿಕ್ ಆಮ್ಲ. ಮುಲ್‍ಹಾರಿ ಎಂಬಲ್ಲಿ ಸೂಪರ್ ಫಾಸ್ಫೇಟ್ ಮತ್ತು ರತ್ಲಾಮ್‍ನಲ್ಲಿ ಆಲ್ಕೋಹಾಲ್ ತಯಾರಿಕೆಯುಂಟು. ಇವುಗಳಲ್ಲದೆ ಇತರ ಕೈಗಾರಿಕೆಗಳೂ ಉಂಟು. ಅವುಗಳಲ್ಲಿ ಅಸ್ಫೋಟಕ ವಸ್ತುಗಳು ದುರ್ಗದಲ್ಲೂ ಪ್ಲೈವುಡ್ ಹಲಗೆಗಳು ಬಸ್ತಾರಿನಲ್ಲೂ ವಿದ್ಯುತ್ ಮೋಟಾರುಗಳು ಇಂದೂರಿನಲ್ಲೂ ಆಕ್ಸಿಜನ್ ಇಂದೂರು, ಭೋಪಾಲಗಳಲ್ಲೂ ಕಾಗದ ಆಮ್ಲಾಯ್, ಸೆಹೋರ್, ಭೋಪಾಲ್‍ಗಳಲ್ಲಿ ಕಾಸ್ಟಿಕ್ ಸೋಡಾ ಆಮ್ಲಾಯ್‍ನಲ್ಲೂ ತಯಾರಾಗುವುದುಂಟು. ಭೋಪಾಲಿನ ರಸಾಯನಿಕ ಕಾರ್ಖಾನೆಯಲ್ಲಿ ಯಾಂತ್ರಿಕ ದೋಷದಿಂದ ಹೊರಸೂಸಿದ ವಿಷಾನಿಲದಿಂದ ಅನೇಕರ ಪ್ರಾಣಹಾನಿಯಾದದ್ದು ಇತ್ತೀಚಿನ (1985) ಮಹಾದುರಂತ. ಸಾಂಪ್ರದಾಯಿಕ ಗ್ರಾಮ ಮತ್ತು ಗೃಹಕೈಗಾರಿಕೆಗಳಿಗೂ ಈ ರಾಜ್ಯ ಪ್ರಖ್ಯಾತಿ ಪಡೆದಿದೆ. ಕೈ ಮಗ್ಗದಲ್ಲಿ ತಯಾರಿಸುವ ಚಾಂದೇರಿ ಮತ್ತು ಮಹೇಶ್ವರಿ ಸೀರೆಗಳಿಗೂ ತೋಸಾ ರೇಷ್ಮೆ ಮತ್ತು ಇತರ ಬಟ್ಟೆಗಳಿಗೂ ಹೆಚ್ಚು ಖ್ಯಾತಿ ಗಳಿಸಿದೆ. ಗುಡಿ ಕೈಗಾರಿಕೆಗಳಲ್ಲಿ ಬಟ್ಟೆ ಮೇಲೆ ಅಚ್ಚು ಮಾಡುವುದು (ಚುನಾರಿ, ಹದಾರ) ಚರ್ಮದ, ಅರಗಿನ ವಿವಿಧ ಸಾಮಾನುಗಳ ಹಾಗೂ ಬೊಂಬೆಗಳ ತಯಾರಿಯುಂಟು. ಕುಸುರಿ, ಶಿಲ್ಪಕೆಲಸ, ಭೋಪಾಲಿನ ಜರಿ ಕೈಚೀಲಗಳು, ಷೆಯೋಪುರದ ಸೆಗಣಿ ಬೊಂಬೆಗಳು. ಗ್ವಾಲಿಯರಿನ ಕಲ್ಲಿನ ಕೆಲಸ, ಜಗದಲ್‍ಪುರದ ಕಂಚು, ಚರ್ಮ ಹಾಗೂ ತಾಳೆ ಎಲೆಯ ಸಾಮಾನುಗಳು, ಗಾಜಿನ ಮಣಿಗಳು, ಅರಗಿನ ಆಭರಣಗಳು, ಮತ್ತಿತರ ಸಾಮಾನುಗಳ ತಯಾರಿಕೆ ಇತ್ಯಾದಿಗಳುಂಟು. ಇವಲ್ಲದೆ ಇತ್ತೀಚೆಗೆ ಸಕ್ಕರೆ ತಯಾರಿಕೆ, ಅಡುಗೆಯೆಣ್ಣೆ, ಮಡಕೆ ಕುಡಿಕೆಗಳು ಮರದ ಸಾಮಾನುಗಳು, ಔಷಧ, ಬಿಸ್ಕೆಟ್, ಎಂಜನಿಯರಿಂಗ್ ಉಪಕರಣಗಳ ತಯಾರಿಕೆ ಹೆಚ್ಚಾಗಿ ನಡೆಯುತ್ತಿದೆ. 2002-03ರ ಸಾಲಿನಲ್ಲಿ 77.5 ಮಿಲಿಯನ್ ಮೀಟರ್ ಬಟ್ಟೆ ತಯಾರಿಸಲಾಗಿತ್ತು. ಇದೇ ಕಾಲದಲ್ಲಿ ಈ ರಾಜ್ಯ 50.6 ಸಾವಿರ ಮೆಟ್ರಿಕ್ ಟನ್ನುಗಳ ಕಾಗದವನ್ನೂ 12.88 ಮಿಲಿಯನ್ ಮೆಟ್ರಿಕ್ ಟನ್ನುಗಳಷ್ಟು ಸಿಮೆಂಟ್‍ನ್ನೂ ಉತ್ಪಾದಿಸಲಾಗಿತ್ತು. ಮಧ್ಯಪ್ರದೇಶ 21 ಬಗೆಯ ಖನಿಜಗಳ ಗಣಿಯಾಗಿದೆ. 2002-03 ನೇ ಸಾಲಿನಲ್ಲಿ 2.1 ಮಿಲಿಯನ್ ಮೆಟ್ರಿಕ್ ಟನ್ನುಗಳ ಡಾಲೊ ಮೈಟ್, 73.181 ಕ್ಯಾರೆಟ್ ವಜ್ರ, 250.47 ಮಿ. ಮೆ. ಟನ್ ಸುಣ್ಣ ಕಲ್ಲು, 2.55 ಮಿ.ಮೆ.ಟ ಬಾಕ್ಸೈಟ್, ಮತ್ತು 92 ಮಿ.ಮೆ ಟನ್‍ಗಳ ಕಬ್ಬಿಣದ ಅದುರು ಉತ್ಪಾದಿಸಲಾಗಿತ್ತು.

	ಮೇಲಿನ ಉದ್ಯಮಗಳಿಗೆ ಬೇಕಾದ ವಿದ್ಯುತ್ ಇಟಾರ್ಸಿ, ಕೋರಾಬಾ, ಸಾತ್ನಾ ಭೋಪಾಲ ಮತ್ತು ಅಮರ ಕಂಟಕ್ ನಗರಗಳಲ್ಲಿ ಉತ್ಪಾದನೆಯಾಗುತ್ತದೆ. ಅನೇಕ ವಿವಿಧೋದ್ದೇಶದ ಯೋಜನೆಗಳಲ್ಲಿ ತಾವಾ, ಚಂಬಲ್‍ಕಣಿವೆ, ಗಾಂಧೀಸಾಗರ ಮತ್ತು ರಾಣಾಪ್ರತಾಪ್‍ಸಾಗರ ಸೇರಿವೆ. ಮೂರನೆಯ ವಾರ್ಷಿಕ ಯೋಜನೆಯಲ್ಲಿ ವಿದ್ಯುತ್ ಯೋಜನೆಗಳಿಗಾಗಿ ಈ ಪ್ರಾಂತಕ್ಕೆ 76 ಕೋಟಿ ರೂಪಾಯಿಗಳನ್ನು ಒದಗಿಸಲಾಗಿತ್ತು. ಈ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ ಸುಮಾರು 400 ಮೆ. ವಾ. ನಷ್ಟು ವಿದ್ಯುತ್ ಉತ್ಪಾದನೆ ಗುರಿಯಾಗಿತ್ತು. ಈಗ (1984) ನರ್ಮದಾ ಕಣಿವೆಯ ಯೋಜನೆಯೂ ಸೇರಿದಂತೆ ಒಟ್ಟು 1630.5 ಮಿಲಿಯನ್ ವಾಟ್ಸ್ ವಿದ್ಯುತ್ ಉತ್ಪತ್ತಿಯಲ್ಲಿ ಜಲವಿದ್ಯುತ್ ಕೇಂದ್ರಗಳಿಂದ 193 ಮೆ. ವ್ಯಾ. ವಿದ್ಯುತ್ ಪಡೆಯಲಾಗುತ್ತಿತ್ತು. ಉಳಿದದ್ದು ಶಾಖ ವಿದ್ಯುದುತ್ಪಾದನ ಕೇಂದ್ರಗಳಿಂದ ಪೂರೈಕೆಯಾಗಬೇಕೆಂಬುದು ಯೋಜನೆ. 

	ಪ್ರವಾಸೋದ್ಯಮ: ಪ್ರವಾಸೋದ್ಯಮ ಸಾಕಷ್ಟು ಅಭಿವೃದ್ಧಿಯಾಗಿಲ್ಲ. ಇಲ್ಲಿರುವ ಕೆಲವೊಂದು ಪ್ರವಾಸಿಗರ ಆಕರ್ಷಣೆಗಳು ಬಲುಮಟ್ಟಿಗೆ ಧಾರ್ಮಿಕ ಸ್ಥಳಗಳಾಗಿವೆ. ರೇವಾ ಜಿಲ್ಲೆಯ ಗೋವಿಂದಘರ್‍ನಲ್ಲಿರುವ ಬಿಳಿಸಿಂಹಗಳು ಪ್ರವಾಸಿಗಳನ್ನು ಆಕರ್ಷಿಸಿವೆ. ಗ್ವಾಲಿಯರ್‍ನ ಪ್ರಸಿದ್ಧ ಕೋಟೆ, ರಾಜಾಮಾನಸಿಂಹನ ಅರಮನೆ, ಡೆಲಿಕಮಂದಿರ, ತಾನೆಸೇನ್ ಮತ್ತು ಗಾನ್ಸ್‍ಮೊಹಮ್ಮದ್ ಇವರ ಸಮಾಧಿಗಳು ಜಯವಿಲಾಸ್ ಅರಮನೆ ಮತ್ತು ಗುಂಜರಿ ಮಹಲ್‍ನ ವಸ್ತುಸಂಗ್ರಹಾಲಯ ಪ್ರಸಿದ್ಧವಾದವು. ಸುಮಾರು 950-1100ರಲ್ಲಿ ಚೆಂದೇಲರು ಕಟ್ಟಿಸಿದ ಖಜುರಾಹೊ ದೇವಾಲಯ ಜಗತ್ಪ್ರಸಿದ್ಧವಾದದ್ದು. ಒಟ್ಟು 85 ದೇವಾಲಯಗಳ ಪೈಕಿ ಈಗ 25 ಮಾತ್ರ ಉಳಿದಿವೆ. ಇಲ್ಲಿಯ ಶಿಲ್ಪಕಲೆಗೆ ಮಾರುಹೋಗದವರೇ ಇಲ್ಲ. ಅಶೋಕನ ಕಾಲದ ಸಾಂಚಿಯ ಸ್ತೂಪ ಬುದ್ಧರ ಪವಿತ್ರ ಸ್ಥಳ ಹಾಗೂ ಬೌದ್ಧ ಕಲೆಯ ಒಂದು ಕೇಂದ್ರವೆನಿಸಿದೆ. ಮಾಂಡು ನಗರ ರಾಣಿ ರೂಪಮತಿಯ ನೆನಪನ್ನು ಜನರಲ್ಲಿ ತುಂಬುವ ಸ್ಥಳ. ಹಳೆಯ ಮಹಲ್‍ಗಳು ವಿವಿಧ ಕಟ್ಟಡಗಳು ಹಿಂದಿನ ಮಾಳವ ಅರಸರ ವೈಭವದ ಆಡಳಿತವನ್ನು ನೆನಪಿಗೆ ತರುತ್ತವೆ. ಪಚಮಾರಿ ಸಾತ್‍ಪುರಬೆಟ್ಟ ಶ್ರೇಣಿಯ, ಸದಾಕಾಲ ಹಸುರಿನಿಂದ ತುಂಬಿರುವ ಒಂದು ಗಿರಿಧಾಮ ಸುತ್ತಲ ಪ್ರಕೃತಿ ಸೌಂದರ್ಯಕ್ಕೆ ಹೆಸರಾದದ್ದು. ಕನ್ಹಾ, ಶಿವಪುರಿ ಮತ್ತು ಬಂದರ್‍ಘರ್ ರಾಷ್ಟ್ರೀಯ ಉದ್ಯಾನ ವನಗಳಿವೆ. ವಿಕ್ರಮಾದಿತ್ಯ, ಕಾಳಿದಾಸ, ಅಶೋಕ ಮುಂತಾದವರ ನೆನಪು ತರುವ ಉಜ್ಜಯಿನಿ ನಗರ ಹಿಂದಿನಿಂದಲೂ ವಿದ್ಯಾಕೇಂದ್ರ, ಕಲೆ, ಸಾಹಿತ್ಯಕ್ಕೆ ತೌರು ಎನಿಸಿದೆ. ನರ್ಮದಾ ಮತ್ತು ಸೋನೆ ನದಿಗಳ ಉಗಮಸ್ಥಾನದಲ್ಲಿರುವ ಅಮರಕಂಟಕ್ ಒಂದು ಪವಿತ್ರ ಸ್ಥಳವೆನಿಸಿದೆ. ಜಬ್ಬಲ್‍ಪುರದ ಬಳಿ ನರ್ಮದೆಯ ಕಣಿವೆಯಲ್ಲಿ ಕಂಡುಬರುವ ಅಮೃತಶಿಲಾ ಶ್ರೇಣಿ ನೋಡುಗರನ್ನು ಬೆರಗುಗೊಳಿಸುತ್ತದೆ.

	ಮಧ್ಯಪ್ರದೇಶ ಭಾರತದ ಮಧ್ಯೆದಲ್ಲಿರುವುದರಿಂದ ಅನೇಕ ಮುಖ್ಯ ಮಾರ್ಗಗಳು ಇದರ ಮೂಲಕ ಹಾದು ಹೋಗುವುವು. 1981 ಏಪ್ರಿಲ್ 1ರಂದು ಈ ರಾಜ್ಯದಲ್ಲಿ 4,33,788 ಕಿ.ಮೀ ಉತ್ತಮ ರಸ್ತೆಮಾರ್ಗವೂ ಸೇರಿ ಒಟ್ಟು 6,33,788 ಕಿ.ಮೀ ರಸ್ತೆ ಮಾರ್ಗವಿತ್ತು. ಕೇಂದ್ರ ಮತ್ತು ಉತ್ತರ ರೈಲ್ವೆ ವಿಭಾಗಕ್ಕೆ ಸೇರಿದ ಅನೇಕ ರೈಲು ಮಾರ್ಗಗಳು ರಾಜ್ಯದಲ್ಲಿ ಹರಡಿವೆ. ಭೋಪಾಲ, ಭಿಲಾಸ್‍ಪುರ, ಕತ್ನಿ, ಖಾಂಡ್ವ, ರತ್ನಮ್ ಇವು ಮುಖ್ಯ ರೈಲು ನಿಲ್ದಾಣ ಕೇಂದ್ರಗಳು. ಇಲ್ಲಿಂದ ದೇಶದ ಎಲ್ಲೆಡೆಗೆ ವಾಯುಮಾರ್ಗದ ಸೌಲಭ್ಯವಿದೆ. ಭೋಪಾಲ, ಇಂದೋರ್, ಗ್ವಾಲಿಯರ್, ಖಜುರಾಹೊ ಮತ್ತು ರಾಯ್‍ಪುರಗಳಲ್ಲಿ ವಿಮಾನ ನಿಲ್ದಾಣಗಳಿವೆ.

	ಭಾರತದ ರಾಜ್ಯ ಪುನರ್ವಿಂಗಡಣಾ ನೀತಿಯಂತೆ 1-11-1956ರಲ್ಲಿ ಇಂದಿನ ಮಧ್ಯಪ್ರದೇಶ ರೂಪುಗೊಂಡಿತು. ಆಡಳಿತ ವಿಧಾನಸಭೆಗೆ ಸೇರಿದ್ದು. ಈ ರಾಜ್ಯದಲ್ಲಿ (ವಿಧಾನ ಪರಿಷತ್ತು) ಮೇಲ್ಮನೆಯಿಲ್ಲ. ರಾಜ್ಯವನ್ನು 45 ಜಿಲ್ಲೆಗಳಾಗಿ ವಿಂಗಡಿಸಲಾಗಿದೆ.
ಕ್ರಮ ಸಂಖ್ಯೆ
ಜಿಲ್ಲೆ
ವಿಸ್ತೀರ್ಣ ಚ.ಕಿ.ಮೀ
ಜನಸಂಖ್ಯೆ
ಆಡಳಿತ ಕೇಂದ್ರ

ಬದ್ವಾನಿ
-
10,81,039
ಬದ್ವಾನಿ

ಬಾಲಘಾಟ್
9,229
14,45,760
ಬಾಲಘಾಟ್

ಬೆತುಲ್
10,043
13,94,421
ಬೆತುಲ್

ಭಿಂಡ್
4,459
14,26,951
ಭಿಂಡ್

ಭೋಪಾಲ್
2,772
18,36,784
ಭೋಪಾಲ್

ಛತ್ತರ್‍ಪುರ್
8,687
14,74,633
ಛತ್ತರ್‍ಪುರ್

ಚಿಂದ್ವಾರ
11,815
18,48,882
ಚಿಂದ್ವಾರ

ದಾಮೋಹ್
7,306
10,81,909
ದಾಮೋಹ್

ದಾತಿಯ
2,038
6,27,818
ದಾತಿಯ

ದೆವಾಸ್
7,020
13,06,617
ದೆವಾಸ್

ದಾರ್
8,153
17,40,557
ದಾರ್

ಡಿಂಡೋರಿ
-
5,79,312
ಡಿಂಡೋರಿ

ಗುನ
11,065
16,65,503
ಗುನ

ಗ್ವಾಲಿಯರ್
5,214
16,29,881
ಗ್ವಾಲಿಯರ್

ಹಂದ
-
4,74,174
ಹಂದ

ಹೋಸಂಗಾಬಾದ್
10,037
10,85,011
ಹೊಸಂಗಾಬದ್

ಇಂದೋರ್
3,898
25,85,321
ಇಂದೋರ್

ಜಬಲ್‍ಪುರ್
10,160
21,67,469
ಜಬಲ್‍ಪುರ್

ಜಬುವಾ
6,782
13,96,677
ಜಬುವಾ

ಕತ್ನಿ
-
10,63,689
ಕತ್ನಿ

ಖಾಂಡ್ವ (ಪೂರ್ವ ನಿಮಾರ್)
10,779
17,08,170
ಖಾಂಡ್ವ

ಖರ್ಗೊನಿ (ಪಶ್ಚಿಮ ನಿಮಾರ್)
13,450
15,29,954
ಬರ್ಗೊನಿ

ಮಾಂಡ್ಲ
13,269
8,93,908
ಮಾಂಡ್ಲ

ಮಂದಸೌರ್
9,791
11,83,369
ಮಂದಸೌರ್

ಮೊರೇನ
11,594
15,87,264
ಮೊರೇನ

ನರಸಿಂಗಪುರ್
5,133
9,57,399
ನರಸಿಂಗಪುರ್

ನಿಮುಚ್
-
7,25,457
ನಿಮುಚ್

ಪನ್ನ
7,135
8,54,235
ಪನ್ನ

ರೈಸೆನ್
8,446
11,20,159
ರೈಸೆನ್

ರಾಜ್‍ಘರ್
6,154
12,53,246
ರಾಜ್‍ಘರ್

ರತ್ಲಮ್
4,861
12,14,536
ರತ್ಲಮ್

ರೇವ
6,314
19,72,333
ರೇವ

ಸಾಗರ್
10,252
20,21,783
ಸಾಗರ್

ಸಾತ್ನ
7,502
19,68,648
ಸಾತ್ನ

ಸೆಹೊರೆ
6,578
10,78,769
ಸೆಹೊರೆ

ಸಿಯೊನಿ
8,758
11,65,893
ಸಿಯೊನಿ

ಷಹದಲ್
14,028
15,72,748
ಷಹದಾಲ್

ಷಜಪುರ್
6,196
12,90,230
ಷಜಪುರ್

ಷಯೊಪುರ್
-
5,59,715
ಷಯೊಪುರ್

ಷ
ಶಿವಪುರಿ
10,278
14,40,666
ಶಿವಪುರಿ

ಸಿಧಿ
10,256
18,30,160
ಸಿಧಿ

ತಿಕಮ್‍ಗರ್
5,048
12,03,533
ತಿಕಮ್‍ಗರ್

ಉಜ್ಜೈನ್
6,091
17,09,885
ಉಜ್ಜೈನ್

ಉಮರಿಯ
-
5,15,851
ಉಮರಿಯ

ವಿದಿಶ
2,742
12,14,759
ವಿದಿಶ

	ಮಧ್ಯಪ್ರದೇಶದಲ್ಲಿ ಗಿರಿಜನ, ಹರಿಜನ ಸಂಖ್ಯೆ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ 1/3 ಭಾಗವಿದ್ದು 23 ಜಿಲ್ಲೆಗಳಲ್ಲಿ ಗಿರಿಜನರ ಸಂಖ್ಯೆಯೇ ಹೆಚ್ಚಿದೆ. ಇವರ ಅಭಿವೃದ್ಧಿಗೆ ವಿವಿಧ ಯೋಜನೆಗಳನ್ನು ಅಲ್ಲಿಯ ಸರ್ಕಾರ ಕೈಗೊಂಡಿದೆ.

	ಇತಿಹಾಸ: ಭೌಗೋಳಿಕವಾಗಿ ಮಧ್ಯಪ್ರದೇಶ ಭಾರತದ ಮಧ್ಯದಲ್ಲಿದ್ದು ಸಮುದ್ರ ತೀರದಿಂದ ಬಹುದೂರವಿದೆ. ಜೊತೆಗೆ ಇದರ ಸುತ್ತಲೂ ಇರುವ ಬೆಟ್ಟ ಕಾಡುಗಳಿಂದ ಇದು ಒಂದು ಪ್ರತ್ಯೇಕತೆ ಪಡೆದಿದೆಯೆನ್ನಬಹುದು. ಈ ಪ್ರತ್ಯೇಕತೆ ಇಲ್ಲಿಯ ಸಾಂಸ್ಕøತಿಕ ಹಾಗೂ ವಿಶಿಷ್ಟ ಲಕ್ಷಣಗಳನ್ನು ಸಂರಕ್ಷಿಸಿಕೊಂಡು ಬರುವಲ್ಲಿ ನೆರವಾಗಿದೆ.

	ಪ್ರಾಗಿತಿಹಾಸ: ಸುಮಾರು ಎರಡು ದಶಲಕ್ಷ ವರ್ಷಗಳ ಹಿಂದೆ ಆಫ್ರಿಕದ ಅಸ್ಟ್ರಲೋಪಿಥಕಸ್ ಜನಾಂಗದಂಥ ಆದಿಮಾನವ ಜನಾಂಗವೊಂದು ಭಾರತದ ಮಾಳವ ಮತ್ತು ಚಿಂದಾವರ ಪ್ರಸ್ಥಭೂಮಿ ಪ್ರದೇಶದಲ್ಲಿ, ಮಹಾಕೋಸಲ, ಛೋಟಾನಾಗಪುರ ಮತ್ತು ಛತ್ತಿಸಗಡ ಹಾಗೂ ಬುಂದೇಲಖಂಡದ ಪ್ರದೇಶಗಳಲ್ಲಿ ನೆಲಸಿತ್ತೆಂದು ತಿಳಿದುಬಂದಿದೆ. ಅರಾವಳಿ, ವಿಂಧ್ಯ, ಸಾತ್ಪುರ ಮತ್ತು ಮಹೇಂದ್ರ ಪರ್ವತಶ್ರೇಣಿಗಳಲ್ಲಿರುವ ಮರಳುಕಲ್ಲಿನ ನೈಸರ್ಗಿಕ ಗುಹೆ ಹಾಗೂ ಶಿಲಾಶ್ರಯಗಳಲ್ಲಿ. ನದೀಕಣಿವೆಗಳಲ್ಲಿ ಅನಂತರ ಬಂದ ಜನಾಂಗದವರು ಬಿಟ್ಟ ಶಿಲಾಗೊಡಲಿ ಮತ್ತಿತ್ತರ ಆಯುಧಗಳು ತತ್ಕಾಲೀನ ಸಂಸ್ಕøತಿಗಳ ಸಾಕ್ಷ್ಯಾಧಾರಗಳಾಗಿವೆ. ಭೀಮಬೆಟ್ಕಾ ಹಾಗೂ ಹೋಷಂಗಾಬಾದ್‍ಗಳಲ್ಲಿ ಉತ್ಖನನಗಳನ್ನು ನಡೆಸಲಾಗಿದೆ. ಈಗಿನ ಭಾರತೀಯರ ಪೂರ್ವಜನೆನ್ನಬಹುದಾದ ಭೀಮಬೆಟ್ಕಯನ್ ಮಾನವ ಆಗಿನ ಉಷ್ಟ್ರ ಪಕ್ಷಿಗಳ ಮೊಟ್ಟೆಗಳನ್ನು ಬೋಗುಣಿಯಂತೆ ಬಳಸಿದ. ಅವುಗಳ ಮೇಲೆ ಸೊಗಸಾದ ವಿನ್ಯಾಸಗಳಿಂದ ಅಲಂಕರಣಗಳನ್ನು ಮಾಡಿದ, ಅರೆಪ್ರಶಸ್ತಶಿಲೆಗಳಿಂದ ಮಣಿಗುಂಡುಗಳನ್ನು ತಯಾರಿಸಿದ. ಇವು ಭೀಮಬೆಟ್ಕಾ, ಭೋಪಾಲ, ನಾಗ್ಡಾ, ರುನಿಜ ದಂಗವಾಡ, ಪಗರಿಯಾ, ಕೋಟ, ಬಾದ್ನಾಗರ ಹಾಗೂ ಕೆನ್ ನದೀ ಕಣಿವೆಯಲ್ಲಿಯ ಕೆಲವು ನೆಲೆಗಳಲ್ಲಿ ಅನ್ವೇಷಿತವಾಗಿವೆ. ಭಾರತದಲ್ಲಿ ಇವು ಮಾನವ ಕಲಾ ಚಟುವಟಿಕೆಗಳ ಪ್ರಪ್ರಥಮ ಮತ್ತು ಪ್ರಾಚೀನ ದಾಖಲೆಗಳು.

	ಮಧ್ಯಪ್ರದೇಶದ ಪ್ರಾಗೈತಿಹಾಸಿಕ ನೆಲೆಗಳ ಪರಿಶೋಧನೆಗಳಿಂದ ನರ್ಮದಾ, ವೈನಗಂಗಾ ಮತ್ತಿತರ ನದೀಕಣಿವೆಗಳಲ್ಲಿ ಪ್ರಾಚೀನ ಮಾನವರ ಉಪಸ್ಥಿತಿಯ ಪುರಾವೆಗಳು ಲಭ್ಯವಾಗಿವೆ. ಅದಂಘರ್, ಭೇಡಾಗಾಟ್, ಬಾರಾಸಿಮ್ಲಾ ಮುಂತಾದ ನೆಲೆಗಳಲ್ಲಿ ಪ್ರಾಚೀನ ಮತ್ತು ಮಧ್ಯಶಿಲಾಯುಗದ ಆಯುಧಗಳು ಲಭಿಸಿವೆ. ನಿಂಬೇರಾ, ಸಾಲಿವಾನ, ಸಕ್ರಿ, ಕಸ್ತಾರ ಇತ್ಯಾದಿ ನೆಲೆಗಳಲ್ಲಿ ದೊರೆತಿರುವ ವಿವಿಧ ತೆರನ ಹೆರೆಯುವ ಸಾಧನಗಳು, ಕೊರೆಯುಳಿಗಳು, ಅಲಗಿನ ಆಯುಧಗಳು, ಎಲೆಯಾಕಾರದ ಮತ್ತು ಅರ್ಧಚಂದ್ರಾಕೃತಿಯ ಉಪಕರಣಗಳು ಮಧ್ಯ ಹಾಗೂ ಅಂತ್ಯ ಶಿಲಾಯುಗದ ಜನರು ಅಲ್ಲಿ ವಾಸಿಸಿದ್ದಕ್ಕೆ ಕುರುಹುಗಳಾಗಿವೆ.

	ಮೇಲಣ ಪ್ರಾಚೀನ ಶಿಲಾಯುಗದ ಮಾನವರು ಕೈಹಿಡಿತಕ್ಕೆ ಸುಲಭವಾಗಿ ಸಿಕ್ಕುವಂಥ ಸೂಕ್ಷ್ಮ ಶಿಲಾಯುಧಗಳ ತಯಾರಿಕೆಗೆ ಅಗೇಟ್‍ನಂಥ ಅರೆಪ್ರಶಸ್ತ ಶಿಲೆಯನ್ನು ಉಪಯೋಗಿಸಿಕೊಂಡಿದ್ದಾರೆ. ಬಿಲ್ಲುವಿದ್ಯೆ ಈ ಜನರಿಗೆ ಪರಿಚಿತ. ಮಧ್ಯಪ್ರದೇಶದ ಅನೇಕ ಗುಹೆ ಹಾಗೂ ಶಿಲಾಶ್ರಯಗಳಲ್ಲಿ ಕಂಡು ಬರುವ ಚಿತ್ರಗಳಿಂದ ಇವರ ಸಾಮಾಜಿಕ ಹಾಗೂ ಧಾರ್ಮಿಕ ಪರಿಕಲ್ಪನೆಗಳನ್ನು ಅನೇಕ ಪುರಾತತ್ತ್ವಶಾಸ್ತ್ರಜ್ಞರು ವಿವೇಚಿಸಿದ್ದಾರೆ. ಭೀಮಬೆಟ್ಕಾ, ಜವೋರ, ಅದಂಘರ್, ಪಾಚ್‍ಮರ್ದಿ, ಸುಜನ್‍ಪುರ, ಅಬ್‍ಚಾಂದ್, ಗ್ವಾಲಿಯರ್, ಶಿವಪುರಿ, ಮೋದಿ ಗಾಂಧಿಸಾಗರ, ಭೋಪಾಲ, ರಾಯ್‍ಸೆನ್ ಮುಂತಾದ ನೆಲೆಗಳಲ್ಲಿಯ ಗುಹೆ ಶಿಲಾಶ್ರಯಗಳಲ್ಲಿ ವರ್ಣಚಿತ್ರಗಳು ಕಂಡುಬಂದಿವೆ. ಹೆಚ್ಚಿನ ಚಿತ್ರಗಳು ಊದಾ, ಕೆಂಪು ಹಾಗೂ ತಿಳಿಕಿತ್ತಳೆ ಕಂದುಬಣ್ಣದ ಛಾಯೆಗಳಲ್ಲಿ ರಚಿತವಾಗಿವೆ. ಜಿಂಕೆ, ಕಾಡುಹಂದಿ, ಆನೆ, ಕೋತಿ, ಘೇಂಡಾಮೃಗ ಮುಂತಾದ ಪ್ರಾಣಿಗಳು, ಬೇಟೆಯ ದೃಶ್ಯಗಳು ಮತ್ತು ರೇಖಾವಿನ್ಯಾಸಗಳನ್ನು ಕಾಣಬಹುದು. ಸುಮಾರು ನಾಲ್ಕುಸಾವಿರ ಗುಹೆ ಶಿಲಾಶ್ರಯಗಳನ್ನು ರಾಯ್‍ಸೆನ್, ಭೋಪಾಲ ಹಾಗೂ ಜವೋರಗಳ ನಡುವಣ ಮರಳುಕಲ್ಲಿನ ಬೆಟ್ಟಸಾಲಿನಲ್ಲಿ ಗುರುತಿಸಲಾಗಿದೆ.

	ಜಬಲ್‍ಪುರ ಪ್ರದೇಶಗಳಲ್ಲಿ ನವಶಿಲಾಯುಗದ ನೆಲೆಗಳನ್ನು ಅನ್ವೇಷಿಸಲಾಗಿದೆ. ಸುಮಾರು ಏಳೂವರೆ ಸಾವಿರ ವರ್ಷಗಳ ಹಿಂದೆಯೇ ನವ ಶಿಲಾಯುಗದ ಮಾನವನಿಗೆ ಕೃಷಿಯ ಪರಿಚಯವಿದ್ದು ಬತ್ತ ಬೆಳೆಸಿದ್ದಕ್ಕೆ ಕುರುಹುಗಳಿವೆ. ಬೇತ್ವಾ, ಚಂಬಲ್ ಹಾಗೂ ನರ್ಮದಾ ನದೀಕಣಿವೆಗಳಲ್ಲಿ ಹೊಸದಾಗಿ ವಸತಿ ಹೂಡಿದ ತಾಮ್ರ ಶಿಲಾ ಸಂಸ್ಕøತಿಯ ಜನರೊಂದಿಗೆ ನವಶಿಲಾಯುಗದ ಜನರ ಸಂಪರ್ಕವುಂಟಾಯಿತು. ಈ ತಾಮ್ರ ಶಿಲಾಸಂಸ್ಕøತಿಯ ಜನರು ಗಂಗಾಯಮುನಾ ದೋಅಬ್ ಪ್ರದೇಶದಿಂದ ಬಂದು ಮಾಳವ ಪ್ರಸ್ಥಭೂಮಿಯಲ್ಲಿ ನೆಲಸಿ ಕೃಷಿಪ್ರಧಾನ ಬದುಕನ್ನು ರೂಪಿಸಿಕೊಂಡಿದ್ದರು. ಕುಂಭಕಲಾ ಉದ್ಯಮದಲ್ಲಿ ಮತ್ತು ಲೋಹಕಲೆಯಲ್ಲಿ ಇವರು ಗಮನಾರ್ಹ ಪ್ರಗತಿ ಸಾಧಿಸಿದ್ದರು

	ತಾಮ್ರ ಶಿಲಾಸಂಸ್ಕøತಿಗಳಲ್ಲಿ ಸುಮಾರು ನಾಲ್ಕು ಸಾವಿರ ಇನ್ನೂರು ವರ್ಷಗಳಷ್ಟು ಪ್ರಾಚೀನವಾದ ಕಾಯಾಥ ಸಂಸ್ಕøತಿ ಅತಿ ಹಿಂದಿನದಾಗಿದ್ದು ಇದರ ತರುವಾಯ ಅಹರ್ ಹಾಗೂ ಮಾಳವ ತಾಮ್ರ ಶಿಲಾಸಂಸ್ಕøತಿಗಳು ಕಾಣಿಸಿಕೊಂಡವು. ಈ ಸಂಸ್ಕøತಿಯ ಜನರಿಗೆ ಪೂರ್ವಭಾಗದಲ್ಲಿ ನವಶಿಲಾಯುಗದ ಜನರೊಂದಿಗೂ ಪಶ್ಚಿಮಭಾಗದಲ್ಲಿ ಸೈಂಧವ ಜನರೊಂದಿಗೂ ಸಂಬಂಧಸಂಪರ್ಕಗಳುಂಟಾದವು. ನೌದತೋಲಿ, ಏರಣ, ವಿದಿಶಾ, ಇಂದೂರು, ಮಾಂಡ್‍ಸಾರ್, ದಂಗವಾಡ, ಪಿಪ್ಲಿಯಾ, ಲೋರ್ಕ ಹಾಗೂ ರುನಿಜ ಎಂಬ ನೆಲೆಗಳಲ್ಲಿ ನಡೆಸಿದ ಉತ್ಖನನಗಳಿಂದ ಮಾಳವ ಪ್ರಸ್ಥಭೂಮಿ ಹಾಗೂ ನರ್ಮದಾ ಕಣಿವೆಗಳಲ್ಲಿ ನೆಲಸಿದ್ದ ಈ ಕೃಷಿಕ ಜನಾಂಗದ ಬದುಕಿನ ಸ್ಥೂಲರೂಪರೇಖಾಗಳನ್ನು ಗುರುತಿಸಲು ಅಗತ್ಯವಾದ ಸಾಕ್ಷ್ಯಾಧಾರಗಳು ಲಭ್ಯವಾಗಿವೆ. ಬೇತ್ವಾದ ಉಪನದಿಯೊಂದರ ತೀರದಲ್ಲಿರುವ ಏರಣದಲ್ಲಿ ಮತ್ತು ಜಬಲ್‍ಪುರದ ಬಳಿಯ ತ್ರಿಪುರಿಯಲ್ಲಿ ನಡೆಸಲಾದ ಉತ್ಖನಗಳಲ್ಲಿ ತಾಮ್ರಶಿಲಾ ಸಂಸ್ಕøತಿಯ ಕುರುಹಗಳು ದೊರೆತಿವೆ. ಏರಣದಲ್ಲಿ ಕ್ರಿ.ಪೂ.ಸು. 1500ರಿಂದ 1280ರ ತನಕ ತಾಮ್ರಶಿಲಾಸಂಸ್ಕøತಿ ಹರಡಿತ್ತು. ಇಲ್ಲಿ ದೊರೆತ ಕಪ್ಪು ಕೆಂಪು ಮೃತ್ಪಾತ್ರೆಗಳು ಕ್ರಿ. ಪೂ. 1270-1040ರ ನಡುವಣ ಅವಧಿಯದೆಂದು ಪರಿಗಣಿಸಲಾಗಿದೆ.

	ಮೊದಮೊದಲು ಬತ್ತ ಬೆಳೆಯುವ ಪ್ರದೇಶವಾಗಿದ್ದ ಮಾಳವ ಮಳೆಯ ಇಳಿತದಿಂದಾಗಿ ಮತ್ತು ಅಭಿವೃದ್ಧಿ ಹೊಂದಿದ ಕೃಷಿಪದ್ಧತಿಯಿಂದಾಗಿ ಗೋಧಿ ಬೆಳೆಯುವ ಪ್ರದೇಶವಾಯಿತು. ಸೂಕ್ಷ್ಮ ಶಿಲಾಯುಗದ ಬೇಟೆ ಜನರನ್ನು ಹೊರದೂಡಿ ಬಂದ ತಾಮ್ರಶಿಲಾಸಂಸ್ಕøತಿಯ ಜನರು ಫಲವತ್ತಾದ ನದೀಕಣಿವೆ ಪ್ರದೇಶಗಳಲ್ಲಿ ನೆಲೆ ನಿಂತರು. ಇವರಿಗೆ ಹತ್ತಿ ಉಡುಪಿನ ತಯಾರಿಕೆ ತಿಳಿದಿತ್ತು. ಕಂಚಿನ ಕೊಡಲಿ, ಬಾಚಿಗಳನ್ನು ಆಯುಧಗಳಾಗಿ ಬಳಸುತ್ತಿದ್ದರು, ಚಿನ್ನ, ಬೆಳ್ಳಿ ಹಾಗೂ ತಾಮ್ರ ಇವರಿಗೆ ಪರಿಚಿತವಾಗಿದ್ದ ಲೋಹಗಳು ವಿನ್ಯಾಸಭರಿತ ದೊಡ್ಡ ಜಾಡಿಗಳಲ್ಲಿ ಧಾನ್ಯಗಳನ್ನು ಸಂಗ್ರಹಿಸಿಡುವ ಪದ್ಧತಿ ಇದ್ದಿತು. ಕಾರ್ನೀಲಿಯನ್, ಜಾಸ್ಪರ್ ಮುಂತಾದ ಅರೆಪ್ರಶಸ್ತ ಶಿಲೆಗಳಿಂದ ಮಣಿಗಳನ್ನೂ ಲೋಹದ ಆಭರಣಗಳನ್ನೂ ತಯಾರಿಸುತ್ತಿದ್ದರು. ವೃಷಭ, ರುದ್ರ ಹಾಗೂ ಮಾತೃದೇವತೆಯ ಆರಾಧನಾ ಪದ್ಧತಿ ಇತ್ತು. ಯಜ್ಞಯಾಗಾದಿಗಳ ಆಚರಣೆ ಇತ್ತೆನ್ನಲು ನವಾದ, ತೋಡಿ ಹಾಗೂ ದುಗವಾಡಗಳಲ್ಲಿ ಕಾಣಬರುವ ಯಜ್ಞ ಶಾಲೆಗಳು ಸಾಕ್ಷ್ಯವನ್ನೊದಗಿಸುತ್ತವೆ. ಸಿಂಧೂಲಿಪಿಯ ಪರಿಚಯವೂ ಈ ಜನರಿಗಿತ್ತು. ಕರಾವಳಿ ತೀರದಲ್ಲಿಯ ದೂರದ ಸೈಂಧವ ಸಂಸ್ಕøತಿಯ ಸ್ಥಳಗಳೊಂದಿಗೆ ಇವರಿಗೆ ಸಂಪರ್ಕ ಮತ್ತು ಆರ್ಥಿಕ ಸಂಬಂಧಗಳಿದ್ದುವು. 

	ಕ್ರಿ. ಪೂ. 1000ದ ಸುಮಾರಿಗೆ ಈ ಸಂಸ್ಕøತಿ ಕ್ಷೀಣಿಸಿತು. ಮಾಳವದ ನದಿಗಳಲ್ಲಿ ಉಂಟಾದ ಮಹಾಪೂರ ಈ ಸಂಸ್ಕøತಿಯ ನೆಲೆಗಳನ್ನು ನಾಶಪಡಿಸಿತೆಂದು ಕಯಾಥ. ದಂಗವಾಡ ಮತ್ತು ರುನಿಜಗಳಲ್ಲಿ ನಡೆದ ಉತ್ಖನನಗಳಿಂದಲೂ ಜಹ್ರಾಮತ್ತಿತರ ಕೆಲವು ನೆಲೆಗಳ ಪರಿಶೋಧನೆಯಿಂದಲೂ ತಿಳಿದುಬಂದಿದೆ. ಇದೇ ಸುಮಾರಿಗೆ ಕಬ್ಬಿಣಯುಗದ ಪ್ರವೇಶವಾಯಿತು. ವಿನ್ಯಾಸಭರಿತ ಅಲಂಕೃತ ಮೃತ್ಪಾತ್ರೆಗಳ ಬದಲಿಗೆ ಪ್ರಾಗ್‍ಮೌರ್ಯ ಕಾಲದ ಕಪ್ಪು ಕೆಂಪು ಮೃತ್ಪಾತ್ರೆ, ಬಣ್ಣ ಬಳಿದ ಬೂದು ಮೃತ್ಪಾತ್ರೆ ಹಾಗೂ ಉಜ್ಜಿ ಹೊಳಪುಗೊಳಿಸಿದ ಕಪ್ಪು ಮೃತ್ಪಾತ್ರೆಗಳು ಬಳಕೆಗೆ ಬಂದುವು. ನಾಗ್ಡಾ, ಉಜ್ಜಯಿನಿ, ಕಯಾಥ ಮುಂತಾದವು ಕಬ್ಬಿಣಯುಗ ಸಂಸ್ಕøತಿಗೆ ಸೇರಿದ ಇತರ ಕೆಲವು ನೆಲೆಗಳು. ಮಧ್ಯಪ್ರದೇಶದದಲ್ಲಿ ಪುರಾತತ್ವ ಸರ್ವೇಕ್ಷಣೆ ವ್ಯಾಪಾಕವಾಗಿ ಹಾಗೂ ವ್ಯವಸ್ಥಿತವಾಗಿ ಇನ್ನೂ ನಡೆಯಬೇಕಾಗಿದೆ.

	ಇತಿಹಾಸ : ಕ್ರಿ.ಶ. 6ನೆಯ ಶತಮಾನದಲ್ಲಿ ಮಧ್ಯಪ್ರದೇಶ ಮಹಾ ಜನಪದಗಳ ನಾಡಾಗಿತ್ತು. ಇಲ್ಲಿಯ ಅವಂತಿ ಷೋಡಶ ಮಹಾಜನಪದಗಳಲ್ಲೊಂದು. ಇದರ ರಾಜಧಾನಿ ಉಜ್ಜಯಿನಿ. ಉಜ್ಜಯಿನಿ ವಿಕ್ರಮಾದಿತ್ಯನಿಗೆ ಸಂಬಂಧಿತ ನಗರವೂ ಹೌದು. ವಿದಿಶಾ, ಕಯಾಥ, ಉಜ್ಜಯಿನಿ, ಮಹೇಶ್ವರ, ತ್ರಿಪುರಿ, ಮಲ್ಹಾರ್ ಬಿಲವಾಲಿ, ನಂದೂರು ಮುಂತಾದ ಸ್ಥಳಗಳಲ್ಲಿ ನಡೆಸಿದ ಉತ್ಖನನಗಳಿಂದ ಪ್ರಾಗ್ ಮೌರ್ಯ ಮತ್ತು ಚೇದಿಪ್ರದ್ಯೋತ ಸಂಸ್ಕøತಿಗಳಿಗೆ ಸೇರಿದ ಅವಶೇಷಗಳು ಬೆಳಕಿಗೆ ಬಂದಿವೆ. ಕಬ್ಬಿಣದ ಬಳಕೆಯ ಅರಿವು, ಚಿನ್ನ, ಬೆಳ್ಳಿ, ಮತ್ತು ತಾಮ್ರದ ನಾಣ್ಯಗಳ ಚಲಾವಣೆ ಹಾಗೂ ಹಿತ್ತಾಳೆ ಮತ್ತು ತಾಮ್ರದ ಪಾತ್ರೆಪರಟೆಗಳ ಉಪಯೋಗ ಜನಜೀವನದ ಗತಿಗೆ ಹೊಸ ಆಯಾಮವನ್ನು ನೀಡಿತೆಂದು ವಿದಿತವಾಗುತ್ತದೆ. ಈ ಕಾಲದಲ್ಲಿ ತ್ರಿಪುರಿ, ಉಜ್ಜಯಿನಿ, ಏರಣ, ಮಾಹಿಷ್ಮತಿ ಮುಂತಾದ ಹಲವು ನಗರ ಗಣರಾಜ್ಯಗಳು ಪ್ರಾದೇಶಿಕ ಸಾಂಸ್ಕøತಿಕ ಕೇಂದ್ರಗಳಾಗಿ ಬೆಳೆದವು. ಅರಸರಿದ್ದರೂ ನಗರ ಮತ್ತು ಗ್ರಾಮಗಳಲ್ಲಿ ಪ್ರಜಾಸತ್ತಾತ್ಮಕ ರೀತಿಗಳಿಗನುಣವಾದ ಆಡಳಿತವಿತ್ತು.

	ಈ ಕಾಲದಲ್ಲಿ ಪ್ರದ್ಯೋತ ಅವಂತಿಯ ಅರಸನಾಗಿದ್ದ. ಮಥುರಾ ಮತ್ತು ಕೌಶಂಬಿಯ ರಾಜಮನೆತನಗಳೊಡನೆ ಈತನಿಗೆ ರಕ್ತಸಂಬಂಧವಿತ್ತು. ಈತನ ಮಗಳು ವಾಸವದತ್ತೆ ವತ್ಸರಾಜ ಉದಯನನ್ನು ವರಿಸಿದ್ದಳು. ಇವರಿಬ್ಬರ ಅನುಪಮ ಪ್ರೇಮಕ್ಕೆ ಸಂಬಂಧಿಸಿದ, ಶುಂಗಕಾಲದ, ಕೆಲವಾರು ಸುಡಾವೆಮಣ್ಣಿನ ಶಿಲ್ಪಫಲಕಗಳು ಲಭ್ಯವಾಗಿವೆ.

	ಮೌರ್ಯಕಾಲದಲ್ಲಿ ಬಲುಮಟ್ಟಿಗೆ ಇಡೀ ಮಧ್ಯಪ್ರದೇಶ ಮೌರ್ಯ ಸಾಮ್ರಾಜ್ಯಕ್ಕೆ ಸೇರಿದ ಭಾಗವಾಗಿತ್ತು. ಅಶೋಕ ಅರಸನಾಗಿ ಅಧಿಕಾರಕ್ಕೇರುವ ಮೊದಲು ಅವಂತಿಯ ರಾಜ್ಯಪಾಲನಾಗಿದ್ದ. ಈತ ವಿದಿಶಾದ ಶ್ರೇಷ್ಠಿಯೊಬ್ಬನ ಮಗಳನ್ನು ಮದುವೆಯಾದನೆಂದು ಬೌದ್ಧಗ್ರಂಥಗಳು ತಿಳಿಸುತ್ತವೆ. ಬೌದ್ಧಧರ್ಮದ ಪ್ರಸಾರಕ್ಕೆ ನೆರವಾದ ಈತ ಸಾಂಚಿ ಹಾಗೂ ಭಾರ್ಹುತ್‍ಗಳಲ್ಲಿ ಮಹಾಸ್ತೂಪಗಳನ್ನು ನಿರ್ಮಿಸಿದ. ಸಾಂಚಿಯಲ್ಲಿ ಶಾಸನಸಹಿತ ಅಶೋಕಸ್ತಂಭಗಳನ್ನು ನಿಲ್ಲಿಸಿದ. ರೂಪನಾಥ ಮತ್ತು ಗುರ್ಜಗಳಲ್ಲಿಯ ಸ್ತಂಭಗಳೂ ಈ ಕಾಲದವೆ. 

	ಮೌರ್ಯರ ಪತನಾನಂತರ ಶುಂಗರು ಹಾಗೂ ಭಾರ್ಹುತ್ ಸ್ತೂಪಗಳು ಈ ಕಾಲದಲ್ಲಿ ಜೀರ್ಣೂದ್ದಾರಗೊಂಡವಷ್ಟೆ ಅಲ್ಲ; ಅವಕ್ಕೆ ಕಲಾತ್ಮಕವಾದ ಅಲಂಕೃತ ತೋರಣ ದ್ವಾರಗಳೂ ಸೇರ್ಪಡೆಯಾದವು. ಶುಂಗ ಶಾತವಾಹನರ ಕಾಲದಲ್ಲಿ ಉಜ್ಜಯಿನಿ, ಮಾಹಿಷ್ಮತಿ, ವಿದಿಶಾ, ಪದ್ಮಾವತಿ ಮತ್ತು ತ್ರಿಪುರಿ ನಗರಗಳು ಪ್ರಮುಖ ವಾಣಿಜ್ಯ ಕೇಂದ್ರಗಳಾಗಿ ಮತ್ತು ಸಾಂಸ್ಕøತಿಕ ಸ್ಥಳಗಳಾಗಿ ಬೆಳೆದವು. ಕ್ರಿ.ಪೂ. ಎರಡನೆಯ ಶತಮಾನದ ಆರಂಭದ ತನಕ ಮಧ್ಯಪ್ರದೇಶದ ಪ್ರಧಾನ ಭಾಗಗಳನ್ನು ಆಳಿದ ಶಾತವಾಹನರು ವೈದಿಕ ಮತಾನುಯಾಯಿಗಳಾಗಿದ್ದರೂ ಬೌದ್ಧ ಹಾಗೂ ಜೈನಧರ್ಮಗಳಿಗೆ ಪೋಷಣೆ ನೀಡಿದರು. ಪಶ್ಚಿಮ ಭಾರತ ಮತ್ತು ಮಾಳವ ಪ್ರದೇಶಗಳಲ್ಲಿದ್ದ ವಿದೇಶೀಯ ಶಕ ಕ್ಷತ್ರಪರ ವಿರುದ್ಧ ಸಾರ್ವಭೌಮತ್ವಕ್ಕಾಗಿ ಇವರು ಹೋರಾಡಬೇಕಾಯಿತು. ಗೌತಮಿ ಪುತ್ರ ಶಾತಕರ್ಣಿ ಶಕರನ್ನು ಸೋಲಿಸಿದ್ದ: ಆದರೆ ಶೀಘ್ರವೇ ಎರಡನೆಯ ಅರಸನನ್ನು ಸೋಲಿಸಿ ನಷ್ಟವಾದ ಶಕಪ್ರದೇಶಗಳನ್ನು ಹಿಂತಿರುಗಿ ಪಡೆದ, ಶಾತವಾಹನರ ಗಮನ ಮುಖ್ಯವಾಗಿ ದಖನ್ ಪ್ರದೇಶದತ್ತ ಹರಿದುದರಿಂದ ಪಶ್ಚಿಮಭಾರತ ಹಾಗೂ ಮಾಳವಾದ ಬಹು ಭಾಗಗಳಲ್ಲಿ ಶರಕ್ಷತ್ರಪರ ಆಳ್ವಿಕೆ ಮತ್ತಷ್ಟು ಕಾಲ ಮುಂದುವರಿಯುವಂತಾಯಿತು.

	ತ್ರಿಪುರಿ ಪ್ರದೇಶದಲ್ಲಿ 2-3ನೆಯ ಶತಮಾನಗಳಲ್ಲಿ ಬೋಧಿವಂಶಕ್ಕೆ ಸೇರಿದ ಅರಸರು ಆಳುತ್ತಿದ್ದರು. ಸಾಗರ ವಿಶ್ವವಿದ್ಯಾಲಯದವರು ಈಚೆಗೆ ತ್ರಿಪುರಿಯಲ್ಲಿ ನಡೆಸಿದ ಉತ್ಪನ್ನಗಳಲ್ಲಿ ಲಭ್ಯವಾದ ನಾಣ್ಯಗಳು ಮತ್ತಿತರ ಆಧಾರಗಳಿಂದ ಈ ವಂಶದ ನಾಲ್ಕರು ಅರಸರು ಬೆಳಕಿಗೆ ಬಂದಿದ್ದಾರೆ. ಬೋಧಿ ಅರಸರ ಸಮಕಾಲೀನರಾಗಿ ಮಾಘ ಅರಸರು ದಕ್ಷಿಣ ಕೋಸಲವನ್ನು ಆಳಿದರು. 3-4ನೆಯ ಶತಮಾನಗಳಲ್ಲಿ ಮಧ್ಯಭಾರತದಲ್ಲಿ ನಾಗ ಅರಸರು ಪ್ರಬಲರಾದರು. ವಿದಿಶಾ ಕಾಂತಿಪುರಿ (ಮೊರೆನಾ ಜಿಲ್ಲೆಯ ಈಗಿನ ಕುತ್ವಾರ್) ಹಾಗೂ ಪದ್ಮಾವತಿ (ಗ್ವಾಲಿಯರ್ ಜಿಲ್ಲೆಯ ಪಾವಾಯಾ) ಈ ಅಧೀಪರ ಕೇಂದ್ರಗಳಾದವು. ನಾಗ ಅರಸರು ಹಾಗೂ ಅಡವಿ ರಾಜ್ಯಗಳ ನಾಯಕರನೇಕರು ಶಕ-ಕುಷಾಣರ ವಿರುದ್ಧ ಹೋರಾಟಗಳಲ್ಲಿ ಗಮನಾರ್ಹ ಪಾತ್ರ ವಹಿಸಿದರು. 

	4ನೆಯ ಶತಮಾನದಲ್ಲಿ ಉತ್ತರಭಾರತದಲ್ಲಿ ಗುಪ್ತರ ಆಳ್ವಿಕೆ ಆರಂಭವಾಯಿತು. ಸಮುದ್ರಗುಪ್ತ ವ್ಯಾಪಕ ದಿಗ್ವಿಜಯ ಯಾತ್ರೆ ಕೈಗೊಂಡು ಅನೇಕ ಅರಸರನ್ನು ಸೋಲಿಸಿದ. ಪೂರ್ವ ಮಾಳವವನ್ನು ಜಯಿಸಿದ ಸಮುದ್ರಗುಪ್ತ ಅಲ್ಲಿ ತನ್ನ ಮಗ ರಾಮಗುಪ್ತನನ್ನು ಇರಿಸಿದ. ನರ್ಮದಾ ನದಿಯ ದಕ್ಷಿಣ ಭಾಗವನ್ನು ಗುಪ್ತರೊಂದಿಗೆ ಸೌಹಾರ್ದ ಸಂಬಂಧ ಹೊಂದಿದ್ದ ವಾಕಾಟಕರು ಆಳಿದರು. ಸಮುದ್ರಗುಪ್ತನ ಮರಣಾನಂತರ, ರಾಮಗುಪ್ತನ ದೌರ್ಬಲ್ಯವನ್ನು ಮನಗಂಡ ಶಕರು ಪ್ರಬಲರಾದರು. ರಾಮಗುಪ್ತನ ಸೋದರ ಇಮ್ಮಡಿ ಚಂದ್ರಗುಪ್ತ ಶಕ ದೊರೆಯನ್ನು ಕೊಂದು ಗುಪ್ತ ವಂಶದ ಸಾಮ್ರಾಟನಾದ. ಗುಪ್ತಸಾಮ್ರಾಜ್ಯವನ್ನು ಸದೃಢಗೊಳಿಸಿ ಶಕರ ಆಳ್ವಿಕೆಗೆ ಅಂತ್ಯ ಕಾಣಿಸಿದ ಕೀರ್ತಿ ಈತನದು. ಈತನ ಮಗ ಒಂದನೆಯ ಕುಮಾರಗುಪ್ತನ ರಾಜ್ಯಭಾರ ಶಾಂತಿಸಮೃದ್ಧಿಗಳಿಂದ ಕೂಡಿದ್ದಿತು. ಆದರೆ ಈ ಅರಸರ ಆಳ್ವಿಕೆಯ ಕೊನೆಯ ಹೊತ್ತಿಗೆ ಹೂಣರ ದಾಳಿಗಳುಂಟಾದವು. ಈತನ ಮಗ ಸ್ಕಂದಗುಪ್ತ ಪರಾಕ್ರಮದಿಂದ ಹೋರಾಡಿ ಹೂಣರನ್ನು ಸೋಲಿಸಿದರೂ ಗುಪ್ತಸಾಮ್ರಾಜ್ಯದ ಬೇರುಗಳು ಸಡಿಲವಾದವು. ಯಮುನಾ ಮತ್ತು ನರ್ಮದಾ ನಡುವಣ ಪ್ರದೇಶ ಬುಧಗುಪ್ತನ ಕಾಲದತನಕವೂ ಗುಪ್ತರ ಆಡಳಿತಕ್ಕೆ ಸೇರಿದ್ದಿತು. 

	ಸುಮಾರು 5ನೆಯ ಶತಮಾನದ ನೇತೃತ್ವದಲ್ಲಿ ಆಕ್ರಮಣ ಮಾಡಿದರು. 510 ರ ಹೊತ್ತಿಗೆ ಹೂಣ ಸೈನ್ಯ ಪೂರ್ವದಲ್ಲಿ ಮಧ್ಯಪ್ರದೇಶದ ಏರಣದವರೆಗೆ ನುಗ್ಗಿತು. ಗುಪ್ತ ದೊರೆ ಹತನಾದ. ಆದರೆ 528ರ ಹೊತ್ತಿಗೆ ದಶಪುರದ (ಮ್ಯಾಂಡಸಾರ್) ಶೂರದೊರೆ ಯಶೋಧರ್ಮ, ಗುಪ್ತದೊರೆ ನರಸಿಂಹಗುಪ್ತ, ಬಾಲಾದಿತ್ಯನ ನೆರವಿನಿಂದ ಮಿಹಿರಗುಲನನ್ನು ಸೋಲಿಸಿದ.

	ಗುಪ್ತಸಾಮ್ರಾಜ್ಯದ ಪತನಾನಂತರ ಮಗಧ ಪ್ರದೇಶದ ಉತ್ತರ ಭಾಗಗಳು ಕನೂಜಿನ ಹರ್ಷವರ್ಧನನ ಪರಮಾಧಿಕಾರಕ್ಕೆ ಒಳಪಟ್ಟವು. ಉತ್ತರಭಾರತದ ಹರ್ಷವರ್ಧನ ಮತ್ತು ದಕ್ಷಿಣಪಥದ ಚಾಲುಕ್ಯದೊರೆ ಇಮ್ಮಡಿ ಪುಲಕೇಶಿಯ ಸಾಮ್ರಾಜ್ಯಗಳ ನಡುವೆ ನರ್ಮದಾ ನದಿಯೇ ಮೇರೆಯಾಗಿತ್ತೆಂದು ತಿಳಿದುಬರುತ್ತದೆ. ಹರ್ಷ ತನ್ನ ಸೋದರಿ ರಾಜ್ಯಶ್ರೀಯ ಅನ್ವೇಷಣೆಯಲ್ಲಿ ನಿರತನಾಗಿದ್ದಾಗ ವಿಂಧ್ಯದ ಅರಣ್ಯಗಳಿಗೆ ಬಂದಿದ್ದನಂತೆ, ಬಾಣಭಟ್ಟ ಇಲ್ಲಿಯ ಅರಣ್ಯಗಳನ್ನು ರಮ್ಯವಾಗಿ ವರ್ಣಿಸಿದ್ದಾನೆ. ಈ ಕವಿ ಇಂದಿನ ಸಿಧಿ ಜಿಲ್ಲೆಯ ಈಗಿನ ಚಂದ್ರೇಹ್ ಬಳಿಯಲ್ಲೆಲ್ಲೋ ಹುಟ್ಟಿ ಬೆಳೆದವನೆಂದು ಅಭಿಪ್ರಾಯವಿದೆ. 

	650ರಿಂದ 1250ರ ತನಕ ಹಲವಾರು ರಾಜ ಮನೆತನಗಳು ಮಧ್ಯಪ್ರದೇಶದ ವಿವಿಧ ಭಾಗಗಳನ್ನು ಆಳಿದುವು. ಇವರಲ್ಲಿ ಪ್ರಮುಖರಾದವರೆಂದರೆ ಗೂರ್ಜರ ಪ್ರತೀಹಾರರು (ಮಧ್ಯಪ್ರದೇಶದ ಉತ್ತರಭಾಗ), ಚಂದ್ರೇಲರು (ಬುದೇಲ್‍ಖಂಡ), ಕಳಚುರಿಗಳು (ತ್ರಿಪುರಿ ಮತ್ತು ರತ್ನಪುರ ಪ್ರದೇಶಗಳು), ಪಾಂಡುವಂಶಿಗಳು (ಪೂರ್ವ ಮಧ್ಯಪ್ರದೇಶ), ಕಚ್ಛಪಘಾತರು (ಗ್ವಾಲಿಯರ್ ಸುತ್ತಮುತ್ತಲ ಪ್ರದೇಶ) ಹಾಗೂ ಪರಮಾರರು (ಮಾಳವ). (ನೋಡಿ- ಕಳಚುರಿಗಳು) ಚಂದೇಲರು ಪರಮಾರು ಮಿಹಿರಬೋಜ, ವಿದ್ಯಾಧರ, ಧಂಗ, ಗಾಂಗೇಯದೇವ, ಲಕ್ಷ್ಮಿಕರ್ಣ ಒಂದನೆಯ ಯುವರಾಜದೇವ ಹಾಗೂ ಭೋಜ ಪರಮಾರರಂಥ ಅರಸು ಕಲೆ ಮತ್ತು ಸಾಹಿತ್ಯಗಳ ಮಹಾಪೋಷಕರಾಗಿದ್ದರು. ಇವರ ಆಳ್ವಿಕೆಗಳಲ್ಲಿ ಶೈವ ವೈಷ್ಣವ ಹಾಗೂ ಶಾಕ್ತ ಪಂಥಗಳು ಮತ್ತು ಬೌದ್ಧ ಜೈನ ಧರ್ಮಗಳೂ ಅಭಿವೃದ್ಧಿ ಹೊಂದಿದುವು. ಮರ್ಖೇರಾ, ಖಜುರಾಹೊ, ಸುಹಾಗಪುರ, ಗುರ್ಗಿ, ತ್ರಿಪುರಿ, ಭೇರಾಘಾಟ್, ರತನ್‍ಪುರ ಉದಯಪುರ ಮುಂತಾದ ಸ್ಥಳಗಳಲ್ಲಿಯ ವಾಸ್ತುಶಿಲ್ಪ ಅವಶೇಷಗಳು ಆ ಕಾಲದ ಕಲಾಸಿದ್ಧಿಯ ಪ್ರತೀಕಗಳಾಗಿವೆ. 

	12ನೆಯ ಶತಮಾನಾನಂತರ ಮಧ್ಯಪ್ರದೇಶದ ಹಲವು ಭಾಗಗಳು ಮುಸ್ಲಿಮ್ ದಾಳಿಕಾರರ ವಶವಾದವು. 1234ರಲ್ಲಿ ದೆಹಲಿಯ ಇಲ್ತಮಶ್ ಉಜ್ಜಯಿನಿ ಹಾಗೂ ಭಿಲ್ಸಾಗಳನ್ನು ವಶಪಡಿಸಿಕೊಂಡ. 14ನೆಯ ಶತಮಾನದ ಆರಂಭದ ವರ್ಷಗಳಲ್ಲಿ ದೆಹಲಿಯ ಖಲ್ಜಿ ಸುಲ್ತಾನರ ಸೇನೆ ಮಾಳವ ಪ್ರದೇಶವನ್ನು ಆಕ್ರಮಿಸಿತು. ಮಹಮದ್ ತುಘಕಲನ ಸಾಮಾಜ್ಯದಲ್ಲಿ ಮಧ್ಯಭಾರತ ಒಂದು ಅಂಗವಾಗಿತ್ತು. 1526ರಲ್ಲಿ ಬಾಬರ್ ಭಾರತವನ್ನು ಆಕ್ರಮಿಸಿದಾಗ ಮಧ್ಯಪ್ರದೇಶದ ಪಶ್ಚಿಮಭಾಗ ಮಾಳವ ರಾಜ್ಯಕ್ಕೂ ಪೂರ್ವಭಾಗ ಗೊಂಡ್ವಾನದ ಗೊಂಡ ಅಧಿಪರ ಆಳ್ವಿಕೆಗೂ ಸೇರಿಹೋಗಿದ್ದುವು. ಮಾಳವ ಅಕ್ಬರನ ಸಾಮ್ರಾಜ್ಯದ ಒಂದು ಅಂಗವಾಗಿತ್ತು. ಇದೇ ಸಮಯದಲ್ಲಿ ಅಕ್ಬರನ ಸೈನ್ಯ ಗೊಂಡ್ವಾನದ ನಿಬಿಡ ಅರಣ್ಯದೊಳಕ್ಕೆ ನುಗ್ಗಿತು. ಜಬ್ಬಲ್ಪುರದ ಬಳಿ ನಡೆದ ಹೋರಾಟದಲ್ಲಿ ಗೊಂಡರ ರಾಜಮಾತೆ ದುರ್ಗಾವತಿ ಹತಳಾದಳು. ಅದರೂ ಗೊಂಡ್ವಾನ ಪ್ರದೇಶವೆಲ್ಲವೂ ಅಕ್ಬರನ ಹಸ್ತಗತವಾಯಿತೆ ಎನ್ನುವುದು ಸರಿಯಾಗಿ ತಿಳಿದುಬಂದಿಲ್ಲ.

	18ನೆಯ ಶತಮಾನದಲ್ಲಿ ಮೊಗಲರ ಬಲಹೀನತೆಯಿಂದಾಗಿ ಮರಾಠಿಗೆ ಮೇಲೇರುವ ಸದವಕಾಶ ಸಿಕ್ಕಿತು. ಔರಂಗಜೇಬನ ಆಳ್ವಿಕೆಯ ಕೊನೆಯ ಹೊತ್ತಿಗೆ ಮರಾಠರು ಮಾಳವವನ್ನು ಆಕ್ರಮಿಸಿದರು. 1734ರ ಹೊತ್ತಿಗೆ ಮರಾಠರು ಮಾಳವದಲ್ಲಿ ಬಲವಾಗಿ ಬೇರೂರಿದ್ದರು. ಎರಡು ವರ್ಷಗಳ ತರುವಾಯ ಮರಾಠರು ತಮ್ಮ ಲೂಟಿಸಂಪತ್ತನ್ನು ಬುಂದೇಲ್ ಖಂಡ ಪ್ರದೇಶಕ್ಕೆ ಸಾಗಿಸಿದರು. 1760ರ ಸುಮಾರಿಗೆ ಚಂಬಲ್ ಮತ್ತು ನರ್ಮದಾ ನಡುವಣ ಪ್ರದೇಶವೆಲ್ಲ ಮರಾಠರ ಅಧೀನದಲ್ಲಿತ್ತು. ಮರುವರ್ಷ ಸಂಭವಿಸಿದ ಪಾಣಿಪತ್ ಕದನದಲ್ಲಿ ಮರಾಠರಿಗೆ ಪರಾಜಯವುಂಟಾಯಿತು. ಈ ಪ್ರದೇಶದಲ್ಲಿ ಅವರ ಪ್ರಭಾವ ಕ್ಷೀಣಿಸತೊಡಗಿತ್ತು. ಗ್ವಾಲಿಯರ್‍ನಲ್ಲಿ ಸಿಂಧ್ಯ ಮತ್ತು ಇಂದೂರಿನಲ್ಲಿ ಹೋಳ್ಕರ್ ಮನೆತನದವರು ಆಳಲಾರಂಭಿಸಿದರು. 19ನೆಯ ಶತಮಾನದ ಆರಂಭದಲ್ಲಿ ಮಧ್ಯಪ್ರದೇಶದಲ್ಲಿ ಪಿಂಡಾರಿ ಲೂಟಿಕಾರರ ಹಾವಳಿ ವಿಪರೀತವಾಗಿತ್ತು. 1818ರಲ್ಲಿ ಇವರನ್ನು ನಿಗ್ರಹಿಸಲು ಸಾಧ್ಯವಾಯಿತು. ಮರಾಠರ ವಿರುದ್ಧ ಗೆಲವು ಸಾಧಿಸಿದ ಬ್ರಿಟಿಷರ ಆಳ್ವಿಕೆಗೆ ಸಾಗರ ಮತ್ತು ನರ್ಮದಾ ಪ್ರದೇಶಗಳು ಸೇರಿದ್ದುವು. 1853ರಲ್ಲಿ ಉಳಿದ ಪ್ರದೇಶ ಸಹ ಬ್ರಿಟಿಷರ ಆಡಳಿತ ವಲಯಕ್ಕೆ ಸೇರಿತು.

	1857ರ ಭಾರತ ಸ್ವಾತಂತ್ರ್ಯ ಸಂಗ್ರಾಮದ ಪ್ರಥಮ ಯುದ್ಧಕ್ಕೆ ಮೋರಾರಿನಲ್ಲಿದ್ದ ಗ್ವಾಲಿಯರ್ ಸೇನಾತುಕಡಿ ಜೂನ್ 14ರಂದು ಶ್ರೀಕಾರ ಹಾಕಿತು. ಇಂದೂರು ಪ್ರಾಂತದಲ್ಲಿ ಬ್ರಿಟಿಷ್ ರೆಸಿಡೆನ್ಸಿಯ ರಕ್ಷಣೆಗಾಗಿ ಇದ್ದ ಸೇನಾತುಕಡಿಗಳೂ ಗ್ವಾಲಿಯರ್ ಸೇನಾದಳದ ಹಾದಿಹಿಡಿದುವು. ನಿಮಾಕೆ, ನೌಗಾಂಗ್, ಮೊಹೀನ ಮುಂತಾದ ಸ್ಥಳಗಳಲ್ಲಿಯೂ ಬಂಡಾಯದ ಕಿಡಿಗಳು ಹತ್ತಿಕೊಂಡವು. ಅದರೆ ಈ ಭಾಗದ ಬಂಡಾಯವನ್ನು ಬ್ರಿಟಿಷರು ಅಡಗಿಸಿದರು.

	ಮೊದಲು ಮಧ್ಯಭಾರತವೆಂದು ಕರೆಯುತ್ತಿದ್ದುದು ಮಾಳವವನ್ನು ಮಾತ್ರವೆ. 1854ರಲ್ಲಿ ಬುಂದೇಲಖಂಡ ಹಾಗೂ ಬಾಘೇಲಖಂಡ ಮಾಳವಕ್ಕೆ ಸೇರ್ಪಡೆಯಾಗಿ ಸೆಂಟ್ರಲ್ ಇಂಡಿಯಾ ಏಜನ್ಸಿ ರೂಪುಗೊಂಡಿತು. 1901ರಲ್ಲಿ ಆಡಳಿತಾನುಕೂಲಕ್ಕಾಗಿ ಇದನ್ನು ಎಂಟು ಘಟಕಗಳಾಗಿ ವಿಂಗಡಿಸಲಾಯಿತು-ಗ್ವಾಲಿಯರ್ ರೆಸಿಡೆನ್ಸಿ ಮತ್ತು ಇಂದೂರ್ ರೆಸಿಡೆನ್ಸಿ ಹಾಗೂ ಬಾಘೇಲಖಂಡ, ಭೋಪಾಲ, ಭೋಪಾವರ, ಬುಂದೇಲ್‍ಖಂಡ, ಇಂದೂರ್ ಮತ್ತು ಮಾಳವ ಏಜನ್ಸಿಗಳು. 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಪ್ರಾಪ್ತವಾದಾಗ ಸೆಂಟ್ರಲ್ ಇಂಡಿಯಾ ಏಜನ್ಸಿಯನ್ನು ಮಧ್ಯಭಾರತ ಹಾಗೂ ವಿಂಧ್ಯ ಪ್ರದೇಶಗಳಾಗಿ ವಿಭಜಿಸಲಾಯಿತು. 1956ರಲ್ಲಿ ಪ್ರಾಂತಗಳ ಪುನರ್ವಿಂಗಡಣೆಯಾದಾಗ ಈಗಿನ ಮಧ್ಯಪ್ರದೇಶ ರೂಪಿತವಾಯಿತು.

	ವಾಸ್ತು ಶಿಲ್ಪ : ಮಧ್ಯಪ್ರದೇಶದ ಪ್ರಾಗೈತಿಹಾಸಿಕ ಹಾಗೂ ಅದ್ಯೈತಿಹಾಸಿಕ ಕಾಲಗಳಲ್ಲಿಯ ಜನ ರಚಿಸಿದ ವರ್ಣಚಿತ್ರಗಳು ಮತ್ತು ಕೆಲವು ಮಣ್ಣಿನ ಶಿಲ್ಪಗಳು ಲಭ್ಯವಾಗಿದ್ದು ಕಲೆಯಲ್ಲಿ ಆ ಮಂದಿಗೆ ಇದ್ದ ಅಭಿರುಚಿ, ನೈಪುಣ್ಯ ತಿಳಿದು ಬರುತ್ತವೆ. ಸಾಂಚಿಯ ಉತ್ಖನನದಲ್ಲಿ ಬೆಳಕಿನ ಬಂದ ಮೌರ್ಯದೇಗುಲ ಗಜಪೃಷ್ಠಾಕೃತಿಯ ವಿನ್ಯಾಸವುಳ್ಳ ರಚನೆ. ಅದರ ಮೇಲ್ಭಾಗದ ರಚನೆಗಳೆಲ್ಲ ಮರದಲ್ಲಿ ನಿರ್ಮಿತವಾಗಿದ್ದುವೆಂದು ತೋರುತ್ತವೆ. ಸಾಂಚಿಯ ಒಂದು ದೇಗುಲ ಮೂಲತಃ ಕ್ರಿ. ಪೂ. 2ನೆಯ ಶತಮಾನದ ರಚನೆ ಎಂದು ತಿಳಿದುಬರುವುದು. ಇಲ್ಲಿಗೆ ಸಮೀಪದ ಬೆಸನಗರದ ವೈಷ್ಣವಾಲಯ ದೀರ್ಘವರ್ತುಲಾಕಾರದ ತಲವಿನ್ಯಾಸದ್ದು. ಇದರ ಮುಂದೆ ತನ್ನನ್ನು ಭಾಗವತನೆಂದು ಕರೆದುಕೊಂಡು ಗ್ರೀಕ್ ದೊರೆ ಹೇಲಿಯೋಡೂರಸ್ ನಿಲ್ಲಿಸಿದ ಗರುಡಗಂಬವಿದೆ.

	ಗುಪ್ತರ ಕಾಲಕ್ಕೆ ಸೇರಿದ ಉದಯಗಿರಿಯ ದೇಗುಲ ಕ್ರಿ.ಶ. 401ರಲ್ಲಿ ನಿರ್ಮಿತವಾದುದು. ಈ ರಚನೆಯ ಕೆಲಭಾಗವನ್ನು ಬಂಡೆಗಲ್ಲಿನಲ್ಲಿ ಕಡೆದು, ಉಳಿದ ಭಾಗವನ್ನು ಅಂದವಾಗಿ ಕೆತ್ತಿದ ಕಲ್ಲುಗಳಿಂದ ಕಟ್ಟಿರುವುದು ಗಮನಾರ್ಹ. ಬರಿಯ ಬಂಡೆಗಲ್ಲನ್ನು ಬಳಸಿ ನಿರ್ಮಿಸುವ ಘಟ್ಟದಿಂದ ಕೆತ್ತಿದ ಕಲ್ಲುಗಳನ್ನು ಬಳಸಿ ನಿರ್ಮಿಸುವ ಘಟ್ಟಕ್ಕೆ ಪರಿವರ್ತನೆ ನಡೆಯುತ್ತಿದ್ದ ಕಾಲದಲ್ಲಿ ಇದನ್ನು ಕಟ್ಟಿರಬೇಕೆಂದು ವಿಧಿತವಾಗುತ್ತದೆ. ಗರ್ಭಗೃಹ ನಾಲ್ಕು ಕಂಬಗಳಿಂದ ಕೊಡಿದ ಮುಖಮಂಟಪ, ಮಟ್ಟಸ ಚಾವಣಿ ಮತ್ತು ಸರಳ ಭತ್ತಿಪ್ರಾಚೀನ ಗುಪ್ತದೇಗುಲಗಳ ಲಕ್ಷಣಗಳು ಸಾಂಚಿ, ಏರಣಾ, ತಿಗೋವಾಗಳಲ್ಲಿ ಇಂಥ ರಚನೆಗಳನ್ನು ನೋಡಬಹ್ಮದು. ಸ್ವಲ್ಪ ಭಿನ್ನವಾದ ಲಕ್ಷಣಗಳುಳ್ಳ ರಚನೆಗಳು ನಚಾ ಮತ್ತು ಭೂಮರಾಗಳಲ್ಲಿವೆ.

	ಉತ್ತರಕಾಲೀನ ಗುಪ್ತರ ದೇವಾಯಲಗಳಲ್ಲಿ ಸಿರಪುರದ ಲಕ್ಷ್ಮಣ ದೇವಾಲಯ ಇಟ್ಟಿಗೆಯಿಂದ ನಿರ್ಮಿತವಾಗಿದೆ. 7ನೆಯ ಶತಮಾನದ ಈ ರಚನೆ ಚತುರಸ್ರ ಗರ್ಭಗೃಹ, ವಕ್ರರೇಖೆಯ ಬೃಹತ್ ಶಿಖರ, ಕಿರಿದಾದ ಸುಕನಾಸಿ ಹಾಗೂ ಗೋಡೆಯಿಂದಾ ವೃತ ವಾದ ಸ್ತಂಭಮಂಟಪಗಳಿಂದ ಕೂಡಿದೆ, ಇಡೀ ದೇಗುಲ ಎತ್ತರದ ಜಗತಿಯ ಮೇಲಿದೆ. ಪಾವಾಯಾದ ಇಟ್ಟಿಗೆಯ ದೇವಾಲಯ ಇನ್ನೊಂದು ಉಲ್ಲೇಖನೀಯ ರಚನೆ. ಈ ಕಾಲದಲ್ಲಿ ವಾಸ್ತುಶಿಲ್ಪ ಕ್ಷೇತ್ರದಲ್ಲಿ ಹೊಸಪ್ರಯೋಗಗಳ ನಡೆದುವು. ಮಟ್ಟಸ ಚಾವಣಿ, ಗರ್ಭಗೃಹ ಮತ್ತು ಎರಡು ಕಂಬಗಳಿಂದ ಕೂಡಿದ ಮುಖಮಂಟಪಗಳುಳ್ಳ ಚಿಕ್ಕ ಗುಡಿಗಳು ಮಧ್ಯಪ್ರದೇಶದಲ್ಲಿ ವಿದಿಶಾ ಜಿಲ್ಲೆಯ ರಾಮಗಡ, ಛಾಪರ ಮತ್ತು ಬಾದೋಹ್‍ಗಳಲ್ಲಿ ಅನ್ವೇಷಿತವಾಗಿವೆ. ಅನಂತರ ತುಸು ಹೆಚ್ಚು ಅಲಂಕರಣಗಳಿಂದ ಕೂಡಿದ ಆಲಯಗಳನ್ನು ಕುಂಡಲಪುರ, ಮಹುವಾ, ಮಕಾನ್‍ಗಂಜ್ ಮುಂತಾದೆಡೆ ಕಾಣುತ್ತೇವೆ. 

	8-9ನೆಯ ಶತಮಾನಗಳಲ್ಲಿ ಮಧ್ಯಪ್ರದೇಶದ ಕೆಲಭಾಗವನ್ನಾಳಿದ ಗೂರ್ಜರ ಪ್ರತೀಹಾರರ ಕೆಲವು ದೇವಾಲಯಗಳು ಸರಳ ವಿನ್ಯಾಸ, ವಿಶಿಷ್ಟ ಅಲಂಕರಣ, ನಾಗ ಶಿಲ್ಪಾಲಂಕೃತ ಬಾಗಿಲುವಾಡ, ಏಣುಗಳುಳ್ಳ ಚತುರಸ್ರಾಕಾರದ ಸ್ತಂಭಗಳು ಮುಂತಾದ ಲಕ್ಷಣಗಳಿಂದ ಕೂಡಿವೆ. ಗ್ವಾಲಿಯರ್ ಬಳಿಯ ನರೇಶರದ ದೇಗುಲ ಸಮುದಾಯ ಈ ಶೈಲಿಯ ಪ್ರಾಚೀನತವi ನಿದರ್ಶನ, ಆಮ್ರೋಲ್, ಮಹುವಾ ತೆರಸಿ ಮುಂತಾದೆಡೆ ಗೂರ್ಜೂರ ಪ್ರತೀಹಾರ ಶೈಲಿಯವೆಂದು ಗುರುತಿಸಿದ ಕಟ್ಟಡಗಳು ಲಭ್ಯವಾಗಿವೆ. ಗ್ವಾಲಿಯರಿನ ತೆಲೀಕ ಮಂದಿರ ಈ ಶೈಲಿಯ ಭವ್ಯರಚನೆ. ಇದರ ವಿನ್ಯಾಸ-ನವೀನ ರೀತಿಯದು. ಚತುರ ಸ್ರಾಕಾರದ ಗರ್ಭಗೃಹ ಮತ್ತು ಸುಕನಾಸಿಗಳಿವೆ. ಗರ್ಭಗೃಹದ ಮೇಲೆ ಇರುವ ಸುಮಾರು 25 ಮೀಟರ್ ಎತ್ತರದ ಬೋಗಿ ಚಾವಣಿಯನ್ನು ಹೋಲುವ ಮೇಲ್ಕಟ್ಟಡ ಎದ್ದು ಕಾಣುತ್ತದೆ. ಇಂದೂರಿನ ಪಾಳು ಶಿವಾಲಯ, ಬದೋಹದ ಗದರ್ಮಲ್ ದೇಗುಲ, ನಚ್ನಾದ ಚತುರ್ಮುಖ ಮಹದೇವ ದೇವಾಲಯ. ಮನಖೇಡದ ಸೂರ್ಯದೇಗುಲ, ಪಠಾಗಿಯ ಕೂಟ ಕೇಶ್ವರಾಲಯ ಮುಂತಾದವು ಗಮನಿಸಬೇಕಾದ ಪ್ರತೀಹಾರ ರಚನೆಗಳು. ಗ್ಯಾರಸಪುರದ ಮಾಲಾದೇವಿ ದೇಗುಲ ಭಾಗಶಃ ಬಂಡೆಯಲ್ಲಿ ಕಂಡರಿಸಿದ ರಚನೆ.

	8-9ನೆಯ ಶತಮಾನಕ್ಕೆ ಸೇರಿದ ಬಾಂದೊಗಡದ ರಚನೆಗಳಲ್ಲಿ ಕಲಚುರಿ ಲಕ್ಷಣಗಳು ಕಂಡುಬಂದರೂ ಅವು ಹೆಚ್ಚು ಸ್ಪಷ್ಟವಾಗಿ ಗೋಚರಿಸುವುದು ಬೈಜನಾಥದ ವೈದ್ಯನಾಥ ದೇಗುಲ ಹಾಗೂ ಬಿನೈಕದ ಪಾಳು ದೇಗುಲಗಳಲ್ಲಿ ಅರ್ಜುಲದ ವಿಷ್ಣುದೇಗುಲ ಪರಿಪೂರ್ಣವಾದ ಕಲಚುರಿ ರಚನೆ. 10ನೆಯ ಶತಮಾನದ ಈ ರಚನೆ ಹಾಳಾಗಿದ್ದು. ಅಲಂಕೃತ ಬಾಗಿಲುವಾಡ ಮತ್ತು ಕಂಬಗಳು ಮಾತ್ರ ಉಳಿದಿವೆ. ಚಂದ್ರೇಹಿ, ಮಾಸೌನ್, ಮೈಹಾರ, ನೋಹ್ತಾ, ತ್ರಿಪುರಿ, ಗುರ್ಗಿ, ಬಿಲ್ಹಾರಿ, ಮರೈ, ಅಮರ ಕಂಟಕ, ಭೇಡಾಘಾಟ್, ಸುಹಾಗಪುರ ಮುಂತಾದ ಸ್ಥಳಗಳಲ್ಲಿ ಕಳಚುರಿ ರಚನೆಗಳನ್ನು ನೋಡಬಹುದು. ಹಲವೆಡೆ ಅವಶೇಷಗಳಷ್ಟೇ ಉಳಿದಿವೆ. ರತ್ನಪುರಿಯಿಂದ ಆಳುತ್ತಿದ್ದ ಕಲಚುರಿ ಅರಸರ ನಿರ್ಮಾಣಗಳೆಂದರೆ ಮಾರ್ಕಂಡದ ಮಹಾದೇವ ದೇಗುಲ, ಪಾಲಿಯ ಶಿವಾಲಯ, ಜಂಜ್‍ಗೀರ್ ವಿಷ್ಣುದೇವಾಲಯ, ನಾರಾಯಣಪಾಲದ ನಾರಾಯಣದೇಗುಲ, ಗಂದೈ ಮತ್ತು ದೇವೋರ್ಬಿಜಿಯ ಪಾಳು ದೇವಾಲಯ ಮುಂತಾದವು.

	ಕಚ್ಛಪಘಾತರ ಶೈಲಿಯಲ್ಲಿ ಅಲಂಕರಣಕ್ಕೆ ಪ್ರಾಶಸ್ತ್ಯ ಸಂದಿತು. ಗ್ವಾಲಿಯರ್. ಕಾಡ್‍ವಾಹ, ಸುರ್ವಾಯಾ, ಮಹುವಾ ತೆರಹಿ, ಸುಹೇನಿಯಾ, ಮಿತಾವ್ಲಿ, ಖೇರತ್ ಮುಂತಾದ ಸ್ಥಳಗಳಲ್ಲಿ ಈ ಶೈಲಿಯ ರಚನೆಗಳಿವೆ. ತಗ್ಗಾದ ಅಧಿಷ್ಠಾನ, ಗೋಡೆಯ ಶಿಲ್ಪಗಳು, ಅಲಂಕೃತ ಕಂಬಗಳು, ಐದು ಪಟ್ಟಿಕೆಗಳುಳ್ಳ ಬಾಗಿಲುವಾಡ ಈ ಶೈಲಿಯ ಕೆಲವು ಲಕ್ಷಣಗಳು. ಸುರ್ವಾಯದಲ್ಲಿಯ 10ನೆಯ ಶತಮಾನದ ರಚನೆಗಳು ಈ ಶೈಲಿಯ ಮೊದಲ ರಚನೆಗಳು. ಕೀರ್ತಿರಾಜ (1015-35) ಕಟ್ಟಿಸಿದ ಸುಹೇನಿಯಾದ ಕಾಕನ್ ಮದ್ ದೇಗುಲ ಮಧ್ಯ ಹಂತದ ರಚನೆ. ಇದರ ಶಿಲ್ಪ ಸಂಪತ್ತು ಪ್ರಸಿದ್ಧಿಯಾಗಿದೆ. ಶಿಖರದ ಎತ್ತರ 31 ಮೀಟರ್, ಕಾಡ್‍ವಾಹನದಲ್ಲಿ ಈ ಶೈಲಿಯ ಇಪತ್ತು ಮೂವತ್ತು ಗುಡಿಗಳಿವೆ. ಗ್ವಾಲಿಯರ್‍ನ ಸಾಸ್‍ಬಹೂ ದೇಗುಲ ಈ ಶೈಲಿಯ ಅವಳಿಕಟ್ಟಡ.

	ಚಂದೇಲರು ತಮ್ಮ ರಾಜ್ಯವನ್ನು ಕೆರೆಕಟ್ಟೆಗಳಿಂದ ಕೋಟೆಕೊತ್ತಲಗಳಿಂದ, ಅರಮನೆ ಹಾಗೂ ದೇಗುಲಗಳಿಂದ ಅಲಂಕರಿಸಿದರು. ಮಹೋಬಾ, ಕಾಲಿಂಜರ, ಅಜಯಗಢ ಮುಂತಾದ ಸ್ಥಳಗಳಲ್ಲಿ ಚಂದೇಲ ರಚನೆಗಳನ್ನು ಕಾಣಬಹುದಾದರೂ ಸುಪ್ರಸಿದ್ಧ ದೇಗುಲಗಳಿರುವುದು ಖಜುರಾಹೊದಲ್ಲಿ. ಇಲ್ಲಿ ಶೈವ, ವೈಷ್ಣವ ಹಾಗೂ ಜೈನ ಪಂಥಗಳಿಗೆ ಸೇರಿದ ಮಂದಿರಗಳಿವೆ. ಚೌಷಟ್‍ಯೋಗಿನಿ, ಬ್ರಹ್ಮವರಾಹ ಮುಂತಾದ ಕೆಲವು ದೇವಾಲಯಗಳನ್ನು ಬಿಟ್ಟರೆ ಉಳಿದವೆಲ್ಲ ಒಂದು ಏಕಮೂಲಶೈಲಿಗೆ ಸೇರುತ್ತವೆ. ಎತ್ತರದ ಶಿಲುಬೆಯಾಕಾರದ ಜಗತಿ, ಖಚಿತ ವಿನ್ಯಾಸ, ಶಿಲ್ಪಶ್ರೀಮಂತಿಕೆ ಚಂದೇಲ ಶೈಲಿಯ ಕೆಲವು ಲಕ್ಷಣಗಳು. (ನೋಡಿ- ಖಜುರಾಹೊ)

	ಮಾಳವದ ಪರಮಾರರ ನಿರ್ಮಾಣಗಳನ್ನು ಛತ್ತಿಸಗಡ (ಮಹಾಕೋಸಲ) ಪ್ರದೇಶದಲ್ಲಿ ಕಾಣಬಹುದು. ಉದಯಪುರದ ನೀಲಕಂಠೇಶ್ವರ ಅಥವಾ ಉದಯೇಶ್ವರ ದೇವಾಲಯ 1059ರಲ್ಲಿ ಆರಂಭಗೊಂಡು 1080ರಲ್ಲಿ ಪೂರ್ಣಗೊಂಡ ರಚನೆ.
	ನಕ್ಷತ್ರಾಕಾರದ ತಳವಿನ್ಯಾಸದ ಈ ರಚನೆ ಗರ್ಭಗೃಹ, ಸುಕನಾಸಿ, ಮೂರು ಪ್ರವೇಶಮಂಟಪಗಳುಳ್ಳ ಹಜಾರಗಳಿಂದ ಕೂಡಿದೆ. ಸುತ್ತ ಏಳು ಸಣ್ಣಗುಡಿಗಳಿವೆ. ಏಳುಕಂಬಕ ಹಾಗೂ ಐದು ಸಮಾಂತರ ಪಟ್ಟಿಗಳಲ್ಲಿ ಕಿರುಗೋಪುರಗಳಿಂದ ಕೂಡಿದ ಶಿಖರದ ವಿನ್ಯಾಸ ವಿನೂತನ ಬಗೆಯದು. ಈ ದೇಗುಲದ ಶಿಲ್ಪಗಳ ಮೇಲೆ ನೆರಳು-ಬೆಳಕಿನಾಟಕ್ಕೆ ಸೊಗಸಾದ ಅವಕಾಶ ದೊರೆತಿದೆ. ಉನ್ ಮತ್ತು ಓಂಕಾರ ಮಾಂಧಾತಗಳಲ್ಲಿಯ ದೇವಾಲಯಗಳು ಸುಸ್ಥಿತಿಯಲ್ಲಿಲ್ಲ.

	ಮೂರ್ತಿಶಿಲ್ಪ: ಮಹೇಶ್ವರ-ನೌದತೋಲಿ, ಕಾಯಾಥ, ನಾಗ್ಡಾ, ಏರಣ ಮತ್ತು ತ್ರಿಪುರಿಗಳಲ್ಲಿ ಲಭ್ಯವಾದ ಸುಡಾವೆ ಮಣ್ಣಿನ ಮಾನವ ಮತ್ತು ಪ್ರಾಣಿ ಶಿಲ್ಪಗಳು ಅಂತ್ಯಹರಪ್ಪ ಸಂಸ್ಕøತಿಯ ಶಿಲ್ಪಗಳನ್ನು ನಿಕಟವಾಗಿ ಹೋಲುತ್ತವೆ.
	ಜೀವಂತವೆನಿಸುವ ಮೌರ್ಯಕಾಲದ ಓಜಸ್ವಿ ಯಕ್ಷಯಕ್ಷಿ ಶಿಲ್ಪಗಳು ಶುಂಗ-ಶಾತವಾಹನಕಾಲದಲ್ಲಿ ಇನ್ನಷ್ಟು ಅಭಿವೃದ್ಧಿ ಹೊಂದಿದುವು. ಸಪ್ರಮಾಣದ ಯಕ್ಷಯಕ್ಷಿ ಮೂರ್ತಿಗಳು ಪಾವಾಯಾ, ಬೆಸನಗರ ಹಾಗೂ ವಿದಿಶಾಗಳಲ್ಲಿ ದೊರೆತಿವೆ: ಬೇತ್ವಾನದಿಯಲ್ಲಿ ಅನ್ವೇಷಿತವಾದ ಮೂರ್ತಿಗಳೂ ಗಮನಾರ್ಹವಾದವು. ಈ ಕಾಲದ ಶಿಲ್ಪಗಳಲ್ಲಿ ರಮ್ಯತೆ-ನಮ್ಯತೆ ಮೈದಳೆಯುವಂತೆ ಮಾಡುವಲ್ಲಿ ಮಧ್ಯಭಾರತದ ಕಲಾಕಾರರು ಯಶಸ್ವಿಯಾದರು. ಈ ಗುಣಲಕ್ಷಣಗಳು ಗುಪ್ತ ಹಾಗೂ ಗುಪ್ತೋತ್ತರ ಕಾಲದಲ್ಲಿಯ ಶಿಲ್ಪಗಳಲ್ಲಿ ಸಹ ಉಳಿದು ಬೆಳೆದುವು.

	ಲಲಿತಕಲೆಗಳ ಬೆಳೆವಣಿಗೆಗೆ ಅನುಕೂಲಕರವಾದ ಪರಿಸ್ಥಿತಿ ಶುಂಗ-ಶಾತವಾಹನ ಕಾಲದಲ್ಲಿತ್ತು. ಭಾರ್ಹುತ್ ಮತ್ತು ಸಾಂಚಿಯ ಸ್ತೂಪಗಳಲ್ಲಿಯ ಕೆತ್ತನೆ ಅಲಂಕರಣಗಳೇ ಇದಕ್ಕೆ ಸಾಕ್ಷಿಯಾಗಿವೆ. 1873ರಲ್ಲಿ ಕನ್ನಿಂಗ್ ಹ್ಯಾಮ್ ಭಾರ್ಹುತ್ ಸ್ತೂವವನ್ನು ಕಂಡುಹಿಡಿದಾಗ ಭಾರತೀಯ ಕಲಾಲೋಕದಲ್ಲಿ ಮಿಂಚುಹರಿದಂತಾಯಿತು. ಇಲ್ಲಿಯ ಶಿಲ್ಪಗಳಲ್ಲಿ ಹೆಚ್ಚಿನವು ಕಲ್ಕತ್ತದ ಭಾರತೀಯ ವಸ್ತುಸಂಗ್ರಹಾಲಯ ಮತ್ತು ಅಲಹಾಬಾದಿನ ವಸ್ತುಸಂಗ್ರಹಾಲಯಗಳಲ್ಲಿ ಸಂರಕ್ಷಿತವಾಗಿವೆ. ಉಳಿದವು ಇತರ ವಸ್ತುಸಂಗ್ರಹಾಲಯಗಳನ್ನು ಹಾಗೂ ಖಾಸಗಿ ಸಂಗ್ರಹಗಳನ್ನು ಸೇರಿವೆ. ಭಾರ್ಹುತ್‍ನ ತೋರಣ ಮತ್ತು ಕಟಾಂಜನಗಳ ಮೇಲೆ ಬುದ್ಧನ ಜೀವನಕ್ಕೆ ಸಂಬಂಧಿಸಿದ ಘಟನೆಗಳನ್ನು ಹಾಗೂ ಜಾತಕ ಕಥಾನಕಗಳನ್ನು ನಿರೂಪಿಸಲಾಗಿದೆ. ಶಿಲ್ಪಗಳ ಕೆಳಗಡೆ ಇರುವ ಚುಟುಕು ಶಾಸನಗಳಿಂದ ಶಿಲ್ಪಸನ್ನಿವೇಶಗಳನ್ನು ನಿರ್ದಿಷ್ಟವಾಗಿ ಗುರುತಿಸಲು ಸಾಧ್ಯವಾಗುತ್ತದೆ. ಬುದ್ಧನ ಉಪಸ್ಥಿತಿಯನ್ನು ಸ್ತೂಪ, ಧರ್ಮಚಕ್ರ ಮುಂತಾದ ಪ್ರತೀಕಗಳ ಮೂಲಕ ಪರೋಕ್ಷವಾಗಿ ತೋರಿಸಿದೆ. ಇಲ್ಲಿ ಸಂತೃಪ್ತಜೀವನ ಬಿಂಬಿಸುವ ಶಿಲ್ಪಗಳೂ ಇವೆ. ಸೌಂದರ್ಯ ನಿರೂಪಣೆಯಲ್ಲಿ ಕಲೆಗಿಂತ ಜನಪದೀಯ ಅಂಶಗಳಿಗೆ ಪ್ರಾಧಾನ್ಯ ದೊರೆತಿದೆ. ಅಲಂಕರಣ ಹಾಗೂ ದೃಶ್ಯ ವೈಭವದಲ್ಲಿ ಲಾಲಿತ್ಯ ಮತ್ತು ರೇಖಾನಿರ್ದಿಷ್ಟತೆಗಳಿಲ್ಲದಿರುವ ದೋಷಗಳು ಮರೆಯಾಗಿ ಬಿಡುತ್ತವೆ. ಭಾರ್ಹುತ್ ಶಿಲ್ಪಗಳಿಗಿಂತ ಸಾಂಚಿಯ ಶಿಲ್ಪಗಳ ಸಂಖ್ಯೆ ಹಾಗೂ ಸತ್ವದಲ್ಲಿ ಹೆಚ್ಚಿನವು. ಮೊದಲಿನ ರಸಹೀನತೆ ರೂಕ್ಷತೆಗಳ ಬದಲಿಗೆ ಸೂಕ್ಷ್ಮ ನಯಗಾರಿಕೆ, ರಮ್ಯತೆ, ಹಾಗೂ ಜೀವಂತಿಕೆಗಳು ಶಿಲ್ಪಗಳಲ್ಲಿ ಎದ್ದುಕಾಣುತ್ತವೆ. ಬಾಗುಭಂಗಿ, ದೇಹಪ್ರಮಾಣ ವೇಷಭೂಷಣಗಳೆಲ್ಲವೂ ಕಣ್ಸೆಳೆಯುತ್ತವೆ. ಇದಕ್ಕೆ ಸಾಂಚಿಯ ತೋರಣದ್ವಾರದ ಮೇಲಿನ ಅಪ್ಸರ ಶಿಲ್ಪಗಳು ಉತ್ತಮ ಉದಾಹರಣೆ. ಶಿಲ್ಪದ ಕಂಡರಣೆ ಹಾಗೂ ಭಂಗಿಯಲ್ಲಿ ಉದ್ದೀಪಕ ಅಂಶಗಳನ್ನು ಕಾಣುತ್ತೇವೆ. ಈ ಕಾಲದ ಆಕೃತಿ ಶಿಲ್ಪಕಲೆಯಲ್ಲಿ (ಮಣ್ಣಿನ ಶಿಲ್ಪ) ಗ್ರೀಕೋ-ಸಿಥಿಯನ್ ಪ್ರಭಾವ ಕಂಡುಬರುತ್ತದೆ.

	ಕ್ರಿಸ್ತಶಕಾರಂಭದ ಮೊದಲ ಮೂರು ಶತಮಾನಗಳಲ್ಲಿ ಮಧ್ಯಪ್ರದೇಶ ಶಾತವಾಹನ. ನಾಗ ಹಾಗೂ ಕ್ಷತ್ರಪರ ಆಳ್ವಿಕೆಗೆ ಒಳಪಟ್ಟಿತ್ತು. ಸಾಂಸ್ಕøತಿಕ ಪ್ರಗತಿಗೆ ಪೋಷಕವಾದ ಪರಿಸ್ಥಿತಿ ಅಷ್ಟಾಗಿ ಇರಲಿಲ್ಲ. ಅದರೂ ವಿದಿಶಾ. ಸಾಂಚಿ, ಏರಣ, ತುಮೈನ್, ಪಾವಾಯಾ ಮುಂತಾದ ಕಲಾಕೇಂದ್ರಗಳಿದ್ದು. ನಾಗನಾಗಿಣಿ, ಯಕ್ಷಯಕ್ಷಿ, ವೈದಿಕ ಹಾಗೂ ಬೌದ್ಧ ದೇವತಾಪರಿವಾರ ಶಿಲ್ಪಗಳು ರೂಪುಗೊಂಡವು. ಸಾಂಚಿಯಲ್ಲಿ ಮಥುರಾ ಶಿಲ್ಪಶೈಲಿಯ ಕೆಲವು ಶಿಲ್ಪಗಳು ಅನ್ವೇಷಿತವಾಗಿವೆ. ತುಮೈನ್‍ನ ಬಲರಾಮ, ಪಾವಾಯಾದ ವಿಷ್ಣು, ಏರಣದ ನಾಗ ಮುಂತಾದ ಶಿಲ್ಪಗಳಲ್ಲಿ ಕುಷಾಣ ಕಲೆಯ ಪ್ರಭಾವ ಗೋಚರಿಸುತ್ತದೆ.

	ಪಶ್ಚಿಮ ಭಾರತ ದಖನ್‍ಗಳೊಡನೆ ಉಂಟಾದ ನಿಕಟ ಸಂಪರ್ಕದಿಂದಾಗಿ ಮಧ್ಯ ಭಾರತದಲ್ಲಿ ಗುಹಾಂತರ್ಗತ ದೇಗುಲ ನಿರ್ಮಾಣ ಸುಪುಷ್ಪವಾಗಿ ಬೆಳೆಯಿತು. ಭಾರ್ಹುತ್, ವಿದಿಶಾ, ಸಾಂಚಿ, ಪಾವಾಯಾ ಮುಂತಾದ ಕಡೆಗಳಲ್ಲಿಯ ಶಿಲ್ಪಗಳನ್ನು ಪಿತಲ್ಖೋರ, ಭಾಜಾ ಮುಂತಾದ ಸ್ಥಳಗಳಲ್ಲಿಯ ಶಿಲ್ಪಗಳೊಡನೆ ಹೋಲಿಸಿ ನೋಡಬಹುದು.

	ಗುಪ್ತರ ಕಾಲ ಭಾರತೀಯ ಕಲೇತಿಹಾಸದಲ್ಲಿ ಒಂದು ಹೊಸ ಅಧ್ಯಾಯವನ್ನೇ ಆರಂಭಿಸಿತು. ಅಪ್ಪಟ ದೇಶಿಯ ಶಿಲ್ಪಶೈಲಿ ರೂಪುಗೊಂಡು ಪ್ರಭಾವಶಾಲಿಯಾಗಿ ಬೆಳೆಯಿತು. ವಿದಿಶಾ, ಏರಣ, ತುಮೈನ್, ಪಾವಾಯಾ, ಮ್ಯಾಂಡಸಾರ್, ನಚ್ನಾ, ಭೂಮರಾ, ತಿಗೋವಾ ಮುಂತಾದ ಹಲವು ಸ್ಥಳಗಳಲ್ಲಿರುವ ಗುಪ್ತರ ರಚನೆಗಳಲ್ಲಿ ಆ ಕಾಲದ ಶಿಲ್ಪಸೊಗಸನ್ನು ನೋಡಿ ತಣಿಯಬಹುದು. ಬಂಡೆಯಲ್ಲಿ ಕಂಡರಿಸಿದ ಜೀವಂತವೆನಿಸುವ ಶಿಲ್ಪಗಳು ಉದಯಗಿರಿ, ಪಕಾರಿ ಮುಂತಾದೆಡೆ ಕಂಡುಬರುತ್ತವೆ. ನೃಸಿಂಹ ಹಾಗೂ ವರಾಹಾವತಾರಗಳು, ವಿಷ್ಣು ಇತ್ಯಾದಿ ಜನಪ್ರಿಯ ಶಿಲ್ಪವಸ್ತು. ವಿದಿಶಾದಲ್ಲಿ ಎಲ್ಲ ಧರ್ಮಗಳಿಗೆ ಸೇರಿದ ಕಲಾಪರಂಪರೆಗಳೂ ಸಮಾನವಾಗಿ ಬೆಳೆಯುವ ಸದವಕಾಶಗಳಿದ್ದುವು. ಜೀವನಪ್ರಮಾಣದ ಬುದ್ಧ, ವಿಷ್ಣು, ಶಿವ, ಸೂರ್ಯ ಮುಂತಾದ ಮೂರ್ತಿಗಳು ಈ ಕಾಲದಲ್ಲಿ ಕಂಡರಿಸಲ್ಪಟ್ಟವು.

	ಮಧ್ಯಯುಗೀನ ಶಿಲ್ಪಗಳು ಗುಪ್ತ ಶಿಲ್ಪಶೈಲಿಯಿಂದ ಪ್ರಭಾವಿತವಾದವೇ, ಸುಮಾರು 600-1200 ಅವಧಿಯಲ್ಲಿ ಗ್ವಾಲಿಯರ್, ತುವೈನ್, ಬಾರ್ವಾಸಾಗರ್, ನಚ್ನಾ, ಸಿರಾಪುರ ಮುಂತಾದ ಅನೇಕ ಸ್ಥಳಗಳು ಶಿಲ್ಪಕೇಂದ್ರಗಳಾಗಿ ಬೆಳೆದುವು. ಚಂದೇಲರ ಆಶ್ರಯದಲ್ಲಿ ಖಜುರಾಹೊ ವಾಸ್ತು ಹಾಗೂ ಶಿಲ್ಪಕೇಂದ್ರವಾಗಿ ಸಮೃದ್ಧವಾಗಿ ಬೆಳೆಯಿತು. ಜೀವನದ ಎಲ್ಲ ಮುಖಗಳನ್ನೂ ಇಲ್ಲಿಯ ಶಿಲ್ಪ ಸಂಕೋಚವಿಲ್ಲದೆ ಕಂಡರಿಸಿದೆ. ನವರಸಗಳ ನಿರೂಪಣೆ ಇದ್ದರೂ ಶೃಂಗಾರಕ್ಕೆ ಹೆಚ್ಚಿನ ಪ್ರಾಶಸ್ತ್ಯ ಸಂದಿದೆ. ನೋಡುಗರನ್ನು ನಾಚಿಸಬಲ್ಲ ರತಿಶಿಲ್ಪಗಳು ಇಲ್ಲಿವೆ. ಚಂದೇಲ ಶಿಲ್ಪಸಂಪತ್ತಿರುವ ಇತರ ಸ್ಥಳಗಳಾವುವೂ ಖಜುರಾಹೊದಷ್ಟು ಸುಪರಿಚಿತವಾಗಿಲ್ಲ ತ್ರಿಪುರಿಯಲ್ಲಿಯ ಕಲಚುರಿ ಶಿಲ್ಪಗಳು ಮಾರ್ದವತೆ ಹಾಗೂ ನಮ್ಯತೆಗಳಿಂದ ಕೂಡಿದ್ದು ಮನೋಹರವಾಗಿವೆ. ಕಚ್ಚಪಘಾತರ ಶಿಲ್ಪಗಳಲ್ಲಿ ಗುಪ್ತ ಹಾಗೂ ಗೂರ್ಜರ ಪ್ರತೀಹಾರ ಶಿಲ್ಪಶೈಲಿಗಳ ಪ್ರತಿಭಾವವನ್ನು ಕಾಣುತ್ತೇವೆ. ಶಿಲ್ಪವಿವರಗಳು ಸ್ಪಷ್ಟವಾಗಿ ಮತ್ತು ಅಂದವಾಗಿ ಬಿಡಿಸಲ್ಪಟ್ಟಿವೆ. ಮಾಳವದ ಪರಮಾರ ಶಿಲ್ಪಿಶೈಲಿಗೆ ಉದಾಹರಣೆಗಳನ್ನು ಉದಯಪುರ, ವಿದಿಶಾ, ಉಜ್ಜಯಿನಿ, ಧಾರ, ಭೂಜಪುರ ಮುಂತಾದ ಅನೇಕ ಸ್ಥಳಗಳಲ್ಲಿ ಕಾಣಬಹುದು. ಸಾಂಪ್ರದಾಯಿಕ ಚೌಕಟ್ಟಿಗೊಳಪಟ್ಟ ಮತ್ತು ಅಲಂಕಾರ ವಿವರಗಳಿಂದ ಕೂಡಿದ ಈ ಕಾಲದ ಶಿಲ್ಪಿಗಳಲ್ಲಿ ಸೌಂದರ್ಯ ನಿರೂಪಣೆಗಿಂತ ಮೂರ್ತಿಶಿಲ್ಪಶಾಸ್ತ್ರದ ನಿಯಮಗಳು ಮೆರೆಯುವುದನ್ನು ನೋಡುತ್ತೇವೆ. ಇಲ್ಲಿಂದ ಮುಂದೆ ಶೈಲಿ ಸ್ಥಿರೀಕೃತವಾಗಿ ಕಲೆಯ ಪ್ರಗತಿ ಕುಂಠಿತವಾದದ್ದನ್ನು ಗಮನಿಸಬಹುದು. ಮಧ್ಯಪ್ರದೇಶದಲ್ಲಿ ವೈಷ್ಣವ, ಶೈವ, ಶಾಕ್ತ, ಬೌದ್ಧ ಹಾಗೂ ಜೈನ ಶಿಲ್ಪಿಗಳನ್ನು ಕಾಣಬಹುದು. ಕೆಲವಾರು ಲೋಹದ ಮೂರ್ತಿಗಳು ಲಭ್ಯವಾಗಿವೆ.     			
(ಎಚ್.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ